ಕಾಲ ಇನ್ನೂ ಮಿಂಚಿಲ್ಲ…ವಾಣಿಜ್ಯ ಮಂಡಳಿಗೆ ಬನ್ನಿ, ಸಮಸ್ಯೆ ಬಗೆಹರಿಸಿಕೊಳ್ಳೋಣ: ಸುದೀಪ್ ಗೆ ಸಾರಾ ಗೋವಿಂದು ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ನಲ್ಲೀಗ ನಡೆಯುತ್ತಿರುವ ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದ ನಾನಾ ರೂಪ ಪಡೆಯುತ್ತಿದ್ದು, ಇದರ ನಡುವೆ ಇದನ್ನು ಬಗೆಹರಿಸಲು ಫಿಲಂ ಚೇಂಬರ್ ಯತ್ನಿಸುತ್ತಿದೆ.

ನಿರ್ಮಾಪಕ ಕುಮಾರ್, ಫಿಲಂ ಚೇಂಬರ್ ಎದುರು ಧರಣಿ ಕೂತಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು (Sa Ra Govindu) ಮಾತನಾಡಿದ್ದು, ಸುದೀಪ್ ಅವರು ಫಿಲಂ ಚೇಂಬರ್​ನ ಸಂಧಾನ ಸಮಿತಿ ಮುಂದೆ ಹಾಜರಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುದೀಪ್ ಅವರಿಂದ ಹಣ ಕೊಡಿಸಿ ಎಂದು ನಿರ್ಮಾಪಕ ಎಂಎನ್ ಕುಮಾರ್ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಅವರು ಕೇಳಿದ ಕೂಡಲೇ ಹಣ ಕೊಡಿಸಿಬಿಡಲು ಆಗುವುದಿಲ್ಲ. ಸುದೀಪ್ ಸಹ ಸಣ್ಣವರಲ್ಲ. ಚಿತ್ರರಂಗದಲ್ಲಿ ವರ್ಷಗಳಿಂದಲೂ ಇರುವ ವ್ಯಕ್ತಿ. ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರೆ ಕೇವಲ 10-15 ನಿಮಿಷಗಳಲ್ಲಿ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಈ ಹಿಂದೆಯೂ ಈ ರೀತಿಯ ಹಲವಾರು ಸಮಸ್ಯೆಗಳು ವಾಣಿಜ್ಯ ಮಂಡಳಿಯಲ್ಲಿ ಬಗೆಹರಿದಿವೆ ಎಂದಿದ್ದಾರೆ.

ಕಾಲ ಇನ್ನೂ ಮಿಂಚಿಲ್ಲ. ಸುದೀಪ್, ನಮ್ಮವರು, ಕನ್ನಡದ ಕಲಾವಿದರು, ಸುದೀಪ್ ನಮ್ಮ ಹೆಮ್ಮೆ. ಅವರು ಬಂದು ವಾಣಿಜ್ಯ ಮಂಡಳಿಯಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರ ಮೇಲೆ ಯಾರೂ ದೂಷಣೆ ಮಾಡುತ್ತಿಲ್ಲ. ಸುದೀಪ್ ಅವರು ಮಂಡಳಿಗೆ ಬರಬೇಕು, ಕುಮಾರ್ ಹೇಳುತ್ತಿರುವುದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ಸುದೀಪ್ ಅವರೇ ಸಾಬೀತು ಪಡಿಸಬಹುದಾಗಿತ್ತು. ಕುಮಾರ್ ಸುಳ್ಳು ಹೇಳುತ್ತಿದ್ದರೆ ನೀವೇ ಅದನ್ನು ಸಾಬೀತು ಮಾಡಿ, ನಿಮಗೆ ಅವಕಾಶ ಇದೆ. ಒಬ್ಬ ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಸಾರಾ ಗೋವಿಂದು ಎಂದಿದ್ದಾರೆ .

ಸುದೀಪ್ ಅವರೇನು ಮಹಾನ್ ತಪ್ಪು ಮಾಡಿಲ್ಲ, ಅವರು ಕನ್ನಡ ಚಿತ್ರರಂಗದವರು. ಕುಮಾರ್ ಹೇಳುತ್ತಿದ್ದಾರೆ, ಸುದೀಪ್ ಎದುರಿಗೆ ನಾನು ಸಾಬೀತು ಪಡಿಸುತ್ತೇನೆ ಎಂದು. ಸುದೀಪ್ ಸಹ ಹಾಗೆಯೇ ಬಂದು ಅವರ ವಾದ ಮಂಡಿಸಲಿ, ಯಾರದ್ದು ಸರಿಯೋ ತೀರ್ಮಾನ ಆಗಿಬಿಡಲಿ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!