ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಇದೀಗ ದಂಡಕ್ಕೆ ಗುರಿಯಾಗಿದ್ದಾರೆ.
ಪಂದ್ಯ ವೇಳೆ ಅಂಪೈರ್ ಸೂಚನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿಸಲಾಗಿದೆ.
ಘಟನೆ ಆರ್ಸಿಬಿ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ನಡೆದಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಡೇವಿಡ್, ಮುಂದಿನ ಫ್ರೀ ಹಿಟ್ ಎಸೆತವನ್ನು ಸಿಕ್ಸರ್ಗೆ ಎತ್ತಿದ್ದರು. ಈ ವೇಳೆ ಅಂಪೈರ್ಗಳು ಚೆಂಡು ಒದ್ದೆಯಾಗಿದ್ದು ಆಕಾರ ಬದಲಾಗಿದೆ ಎಂದು ಗಮನಿಸಿ ಅದನ್ನು ಬದಲಾಯಿಸಲು ತೀರ್ಮಾನಿಸಿದರು.
ಇದನ್ನೂ ಓದಿ:
ಹೊಸ ಚೆಂಡುಗಳನ್ನು ಮೈದಾನಕ್ಕೆ ತರಲಾಗುತ್ತಿದ್ದಂತೆ, ಟಿಮ್ ಡೇವಿಡ್ ಒಂದು ಚೆಂಡನ್ನು ಕೈಗೆತ್ತಿಕೊಂಡು ಅದನ್ನು ಪರಿಶೀಲಿಸುತ್ತಾ ಅದರ ಆಕಾರವೂ ಸರಿಯಿಲ್ಲ ಎನ್ನುತ್ತಾ ಆಟವಾಡಲು ಆರಂಭಿಸಿದರು. ಅಂಪೈರ್ಗಳು ಹಲವು ಬಾರಿ ಚೆಂಡನ್ನು ಹಿಂತಿರುಗಿಸುವಂತೆ ಸೂಚಿಸಿದ್ದರೂ, ಅವರು ತಕ್ಷಣ ನೀಡದೇ ವಿಳಂಬ ಮಾಡಿದರು. ಇದೇ ಕ್ರಮವನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಪ್ರಕಾರ, ಅಂಪೈರ್ ನಿರ್ದೇಶನಗಳನ್ನು ಪಾಲಿಸದ ಆಟಗಾರರಿಗೆ ದಂಡ ವಿಧಿಸಲಾಗುತ್ತದೆ. ಈ ಪ್ರಕರಣದಲ್ಲಿ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.



