ಹೊಸದಿಗಂತ ವರದಿ, ಕಲಬುರಗಿ:
ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಬಾಬು ಜಗಜೀವನರಾವ ಮೆಟ್ರಿಕ್ ನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ನಾನು ಸಹ ನಿಮ್ಮಲ್ಲಿ ಒಬ್ಬ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರ ಅನುಯಾಯಿಗಳು. ಡಾ. ಅಂಬೇಡ್ಕರ್ ಅವರ ಜ್ಞಾನವನ್ನು ಗೌರವಿಸಿ ಅವರನ್ನು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಯಿತು ಎಂದರು.
ಸಮಾಜದಲ್ಲಿ ಎಲ್ಲರು ಸಮಾನವಾಗಿ ಬದುಕುವುದು ಸಾಮಾಜಿಕ ಸಾಮರಸ್ಯ. ಪ್ರಸ್ತುತ ಸಮಾಜದಲ್ಲಿ ಎಲ್ಲರು ಒಟ್ಟಾಗಿ ಜೀವನ ನಡೆಸುತ್ತಿಲ್ಲ. ಇದನ್ನು ನಾವೆಲ್ಲರೂ ಸರಿಪಡಿಸಬೇಕು. ಸಂವಿಧಾನದ ಪ್ರಕಾರ ಎಲ್ಲರು ಸಮಾನರು. ಸಮಾಜವು ಒಡೆದು ಹೋಗಿದೆ. ನಾಲ್ಕು ವರ್ಣಗಳು ನಾಲ್ಕು ಸಾವಿರ ಜಾತಿಗಳಾಗಿದೆ. ಕೆಳವರ್ಗ, ಮೇಲ್ವರ್ಗ ಎಂದು ಸಮಾಜದಲ್ಲಿ ಜಾತಿ ವ್ಯವಸ್ಥೆ ಪದರು ಪದರು ಆಗಿ ಹಂಚಿಹೋಗಿದೆ ಕಳವಳ ವ್ಯಕ್ತಪಡಿಸಿದರು.
ನೆಲ, ಜಲ, ಸಂಸ್ಕಾರ, ಆಹಾರ ಒಂದಕ್ಕೊಂದು ಸಂಬಂಧವಿಲ್ಲದ ವ್ಯವಸ್ಥೆ ನಿರ್ಮಾಣವಾಗಿದೆ. ಪಂಡಿತ ದೀನದಯಾಳ ಉಪಾಧ್ಯಾಯ ಅವರು ಸಮಾಜದಲ್ಲಿ ಸಮಾನತೆ ತರಲು ಎಲ್ಲರ ಹತ್ತಿರ ಸ್ವೀಕಾರ ಭಾವನೆ ಬರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಸವಣ್ಣ, ಡಾ. ಅಂಬೇಡ್ಕರ ಅವರು ಎಲ್ಲ ವರ್ಗಗಳ ಕೊಂಡಿಯಾಗಬೇಕಾಗಿತ್ತು. ಆದರೆ, ನಾವು ಅವರನ್ನು ಜಾತಿಗೆ ಸೀಮಿತಗೊಳಿಸಿದ್ದೇವೆ. ಸಮಾಜದ ಮಧ್ಯ ಇರುವ ದ್ವೇಷವನ್ನು ಸಾಮರಸ್ಯದಿಂದ ಎದರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಸತಿನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಒದಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ. ನಗರ ಕಾರ್ಯದರ್ಶಿ ಕ್ಯಾತಪ್ಪ ಮೇದಾ ಮತ್ತು ವಸತಿನಿಲಯದ ವಾರ್ಡನ್ ಅವರು ಉಪಸ್ಥಿತರಿದ್ದರು.