ಹೊಸ ದಿಗಂತ ವರದಿ, ಸುಂಟಿಕೊಪ್ಪ:
ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಕೇಬಲ್ ಅಳವಡಿಸಲು ತೆಗೆಯಲಾಗಿರುವ ಗುಂಡಿಗೆ ಪ್ರವಾಸಿಗರ ಕಾರೊಂದು ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಪ್ರವಾಸಿಗರ ಕಾರು ಮುಂಭಾಗದಿಂದ ಬರುತ್ತಿದ್ದ ವಾಹನಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ಬಿಡುವ ಸಂದರ್ಭ ಹೆದ್ದಾರಿ ಬದಿ ಕೇಬಲ್ ಅಳವಡಿಸಲು ತೆಗೆಯಲಾದ ಗುಂಡಿಗೆ ಬಿದ್ದಿದೆ.
ಹೆದ್ದಾರಿ ಬದಿಯಲ್ಲಿ ಕೇಬಲ್ ಅಳವಡಿಸಲು ತೆಗೆಯಲಾಗಿರುವ ಗುಂಡಿಗಳ ಬಳಿಯಲ್ಲಿ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸದೇ ಇರುವುದರಿಂದ ಅನಾಹುತಗಳು ಸಂಭವಿಸುತ್ತಲಿದ್ದು, ಮುಂದಿನ ದಿನಗಳಲ್ಲೂ ನಿರ್ಲಕ್ಷ್ಯ ತಳೆದಲ್ಲಿ ವಾಹನ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಸಂಭವಿಸಿ ಪ್ರಾಣ ಹಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಈ ಭಾಗದ ನಿವಾಸಿಗಳು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ.