Sunday, October 2, 2022

Latest Posts

ರೋಗಿಯ ಜೀವ ಉಳಿಸಲು ಟ್ರಾಫಿಕ್​ನಲ್ಲೇ ಕಾರು ಬಿಟ್ಟು 3 ಕಿ.ಮೀ. ಓಡಿದ ಡಾಕ್ಟರ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿದ್ದ ವೈದ್ಯರೊಬ್ಬರು ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಲು ಕಾರನ್ನು ಅಲ್ಲೇ ಬಿಟ್ಟು 3 ಕಿ.ಮೀ. ದೂರ ಓಡಿರುವ ದೃಶ್ಯ ವೈರಲ್​ ಆಗಿದೆ. ರೋಗಿಯೊಬ್ಬರ ಶಸ್ತ್ರಚಿಕಿತ್ಸೆ ಮಾಡಲು ಟ್ರಾಫಿಕ್​ನಲ್ಲೇ ವೈದ್ಯರು ಓಡಿಕೊಂಡೇ ಆಸ್ಪತ್ರೆಗೆ ಬಂದು ರೋಗಿಯ ಜೀವ ಉಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಣಿಪಾಲ್​ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ಕಳೆದ ಆ.30ರಂದು ಎಂದಿನಂತೆ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಳೆಯ ಪರಿಣಾಮ ಅಂದು ಟ್ರಾಫಿಕ್​ ಜಾಮ್​ ಆಗಿ ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಕಿಲೋಮೀಟರ್​ ದೂರದವರೆಗೂ ವಾಹನಗಳು ಸಾಲುಗಟ್ಟಿನಿಂತಿದ್ದವು. ವಾಹನ ಸಂಚಾರ ಸುಗಮವಾಗಿದ್ದರೆ 10 ನಿಮಿಷದಲ್ಲಿ ವೈದ್ಯ ಡಾ.ಗೋವಿಂದ್​ ಅವರು ಆಸ್ಪತ್ರೆಗೆ ತಲುಪಲಿದ್ದರು. ಆದರೆ, ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ್ದರು. ಅತ್ತ ರೋಗಿಯೊಬ್ಬರಿಗೆ ಕರುಳಿನ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆದಿತ್ತು. ನಿಗದಿತ ಸಮಯಕ್ಕೆ ತಲುಪಲು ಟ್ರಾಫಿಕ್​ ಅಡ್ಡಿಯಾಗಿತ್ತು. ಇದನ್ನರಿದ ಅವರು ಕಾರನ್ನು ಚಾಲಕನಿಗೆ ತರಲು ಹೇಳಿ, ಕಾರಿಂದ ಕೆಳಗಿಳಿದು ಓಡಿಕೊಂಡೇ ಆಸ್ಪತ್ರೆಗೆ ತಲುಪಿದರು.ವೈದ್ಯರ ನಡೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ದೃಶ್ಯ ವೈರಲ್​ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಗೋವಿಂದ್​, ಅಂದು ರೋಗಿಯೊಬ್ಬರಿಗೆ ಲ್ಯಾಪ್ರೋಸ್ಕೋಪಿ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ನಿಗದಿಯಾಗಿತ್ತು. ನಾನು ಎಂದಿನಂತೆ ಸರಿಯಾದ ಸಮಯಕ್ಕೆ ಮನೆಯಿಂದ ಹೊರಟೆ. ಆದರೆ ಆಸ್ಪತ್ರೆಗೆ ತಲುಪಲು 3 ಕಿ.ಮೀ. ದೂರ ಇರುವಾಗಲೇ ಟ್ರಾಫಿಕ್​ನಲ್ಲಿ ಸಿಲುಕಿದೆ. 10-15 ನಿಮಿಷ ಕಾದೆ. ಗೂಗಲ್​ ನಕ್ಷೆಯಲ್ಲಿ ಪರಿಶೀಲಿಸಿದಾಗ 45 ನಿಮಿಷ ಆಗುತ್ತೆ ಎಂದು ತೋರಿಸುತ್ತಿತ್ತು. ನಿತ್ಯ ಆಸ್ಪತ್ರೆಗೆ ತಲುಪಲು 10 ನಿಮಿಷ ಆಗುತ್ತಿತ್ತು. ಈಗ ಇನ್ನೂ 45 ನಿಮಿಷ ಎಂದು ತೋರಿಸುತ್ತಿದೆ. ಸದ್ಯಕ್ಕೆ ಟ್ರಾಫಿಕ್​ ಕ್ಲಿಯರ್​ ಆಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಶಸ್ತ್ರಚಿಕಿತ್ಸೆಗೆ ತಡವಾದರೆ ರೋಗಿಗೆ ತೊಂದರೆ ಆಗಬಹುದೆಂದು ಯೋಚಿಸಿ ಕಾರನ್ನು ನನ್ನ ಡ್ರೈವರ್​ಗೆ ತರಲು ಹೇಳಿ ನಾನು ಕಾಲ್ನಡಿಗೆಯಲ್ಲೇ ಹೋದೆ. ನಾನು ಜಿಮ್​ಗೆ ಹೋಗುವುದರಿಂದ ಓಡಲು ಸುಲಭವಾಯಿತು ಎಂದು ವಿವರಿಸಿದರು.

ನಮ್ಮ ಡ್ರೈವರ್​ ಸುಮಾರು ಎರಡೂವರೆ ಗಂಟೆಗಳ ಬಳಿಕ ಆಸ್ಪತ್ರೆಗೆ ಕಾರನ್ನು ತಂದರು. ನಾನು ಕಾರಿನಲ್ಲೇ ಕುಳಿತ್ತಿದ್ದರೆ ಅದೇ ಸಮಯಕ್ಕೆ ಬರಬೇಕಿತ್ತು. ರೋಗಿಗಳ ಯೋಗಕ್ಷೇಮ ನನಗೆ ಮುಖ್ಯ ಎನ್ನುವಾಗ ಅವರ ಮುಖದಲ್ಲಿ ಸಾರ್ಥಕಭಾವ ಕಾಣುತ್ತಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!