ಬಾಗಿಲು ಮುಚ್ಚಿದ್ದ ಚಾಮುಂಡೇಶ್ವರಿ ದೇವಾಲಯಕ್ಕೆ ಸಿಕ್ಕಿತು ಬೀಗ ಮುಕ್ತಿ!

ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ :

ದಲಿತರು ಮತ್ತು ಸವರ್ಣಿಯರ ನಡುವಿನ ಜಾತಿಯ ಕಾರಣಕ್ಕೆ ಕಳೆದ 18 ವರ್ಷಗಳಿಂದ ಮುಚ್ಚಿದ್ದ ದೇವಾಲಯಕ್ಕಿಂದು ಮುಕ್ತಿ ಸಿಕ್ಕಿತ್ತು. ಪರಿಣಾಮ 18 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಾಗಿಲ ಬೀಗ ತೆಗೆದು ಪೂಜೆ ಸಲ್ಲಿಸಲಾಯಿತು.
ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ತಹಸೀಲ್ದಾರ್ ಶ್ವೇತಾ ಅವರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗ್ರಾಮದ ಸವರ್ಣಿಯರು ಹಾಗೂ ದಲಿತರು ತಮ್ಮೊಳಗಿನ ವೈಮನಸ್ಸನ್ನು ಮರೆತು ಪ್ರೀತಿ, ವಿಶ್ವಾಸದಿಂದ ಜೊತೆಗೂಡಿ ದೇವರ ಪೂಜೆ ಮಾಡುವ ನಿರ್ಣಯಕ್ಕೆ ಬಂದರು.
ಜಕ್ಕನಹಳ್ಳಿ ಗ್ರಾಮದ ಚಾಮುಂಡೇಶ್ವರಿ ಹಾಗೂ ಈಶ್ವರನ ದೇವಸ್ಥಾನ ಪ್ರವೇಶಿಸಿದ ಗ್ರಾಮದ ಎಲ್ಲಾ ಸಮುದಾಯದ ಜನರು ಇನ್ನು ಮುಂದೆ ನಮ್ಮಲ್ಲಿರುವ ದ್ವೇಷವನ್ನು ಮರೆತು ಒಂದಾಗಿ ಹೋಗುವುದಾಗಿ ಹೇಳಿದರು.
ಶಾಸಕ ರವೀಂದ್ರ ಶ್ರಿಕಂಠಯ್ಯ ಹಾಗೂ ತಹಸೀಲ್ದಾರ್ ಶ್ವೇತಾ ಅವರ ಪ್ರಯತ್ನಕ್ಕೆ ಎರಡೂ ಸಮುದಾಯದ ಮುಖಂಡರು ಮತ್ತು ಗ್ರಾಮಸ್ಥರು ಎರಡೂ ಕೈಗಳೆತ್ತಿ ಹರ್ಷದಿಂದ ನಾವು ಒಂದಾಗಿದ್ದೇವೆ. ಪೂಜೆ, ಧಾರ್ಮಿಕ ಕಾರ‌್ಯಕ್ರಮದಲ್ಲಿ ಎಲ್ಲ ಸಮುದಾಯದವರೂ ಪಾಲ್ಗೊಳ್ಳುತ್ತೇವೆ ಎಂದು ಕೂಗಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮಧ್ಯ ಪ್ರವೇಶದಿಂದಾಗಿ ಕಳೆದ 18 ವರ್ಷಗಳಿಂದ ಬಾಗಿಲು ಮುಚ್ಚಿದ್ದ ದೇವಾಲಯಗಳು ಬಾಗಿಲು ತೆರೆದು ಭಕ್ತರ ಪೂಜೆಗೆ ಅನುವು ಮಾಡಿಕೊಡುವ ಮೂಲಕ ಜಾತಿ ಸಂಘರ್ಷಕ್ಕೆ ತೆರೆ ಎಳೆಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!