ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರ್ ಘರ್ ತಿರಂಗ ಅಭಿಯಾನ ಆಗಸ್ಟ್ 11ರಿಂದ ಆರಂಭವಾಗಿದೆ. ಇದರ ಭಾಗವಾಗಿ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗ ಯಾತ್ರೆ ನಡೆಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಯುದ್ಧ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಅಹಮದಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರ್ ಘರ್ ತಿರಂಗ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆಯೋಜಿಸಿರುವ ಈ ಕಾರ್ಯಕ್ರಮವು ಭಾರತದ ಧ್ವಜದ ಪ್ರದರ್ಶನದ ಮೂಲಕ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅಹಮದಾಬಾದ್‌ನ ವಿರಾಟ್‌ನಗರ ಪ್ರದೇಶದಲ್ಲಿ ಇಂದು ಸಂಜೆ 4.30ರಿಂದ ಈ ಯಾತ್ರೆ ಪ್ರಾರಂಭವಾಗಲಿದೆ. ಆಗಸ್ಟ್ 14ರಂದು ವಿಭಜನೆಯ ಸ್ಮರಣಾರ್ಥ ದಿನವನ್ನು ಎಲ್ಲಾ ಜಿಲ್ಲೆಗಳಲ್ಲಿ ಮೌನ ಮೆರವಣಿಗೆಯೊಂದಿಗೆ ಆಚರಿಸಲಾಗುವುದು.
ಕೇಂದ್ರ ಸರ್ಕಾರವು ಪ್ರತಿ ಮನೆ, ಅಂಗಡಿ ಮತ್ತು ಕಚೇರಿಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಮೋದಿ ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಕ್ಷದ ‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನ್ ಕಿ ಬಾತ್ನಲ್ಲಿ ನಾಗರಿಕರಿಗೆ ಮನವಿ ಮಾಡಿದ್ದರು.