ಸಿದ್ಧೇಶ್ವರ ಶ್ರೀಗಳಿಗೆ ಇಂದು ಗುರುನಮನ – ಬಯಲೊಳಗೆ ಲೀನವಾದ ಸರಳ ಸಂತರ ಪುಣ್ಯ ಸ್ಮರಣೆ

  • ಪರಶುರಾಮ ಶಿವಶರಣ

ವಿಜಯಪುರ: ಸಾವೆಂಬುವುದು ಮನುಷ್ಯರಿಗೆ ಸೀಮಿತ, ಅದು ಮಹಾತ್ಮರಿಗಲ್ಲ, ಮನುಷ್ಯ ಬದುಕಿರುವವರೆಗೂ ಮಹಾತ್ಮರು ಅವರ ಆತ್ಮದಲ್ಲಿ ಅಜರಾಮರವಾಗಿರುತ್ತಾರೆ. ಅಂತಹವರ ಸಾಲಿನಲ್ಲಿ ನಡೆದಾಡುವ ದೇವರೆಂದೇ ಪ್ರತೀತಿಗೊಂಡ ಸಿದ್ದೇಶ್ವರ ಸ್ವಾಮೀಗಳು ದೇಹ ತ್ಯಾಗ ಮಾಡಿ ಇಂದಿಗೆ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಭಕ್ತಗಣ, ಸಿದ್ದೇಶ್ವರ ಶ್ರೀಗಳನ್ನು ತಮ್ಮ ಆತ್ಮದಲ್ಲಿ ತುಂಬಿಕೊಂಡು ಅವರಿಗೆ ಗುರುನಮನ ಸಲ್ಲಿಸುತ್ತಿದ್ದಾರೆ.

ನಗರದ ಜ್ಞಾನ ಯೋಗಾಶ್ರಮದಲ್ಲಿ ಅನೇಕ ಭಕ್ತರು ಗುರುನಮನಕ್ಕೆ ತಮ್ಮ ತನು, ಮನ, ಧನದಿಂದ ಶ್ರಮಿಸುತ್ತಿದ್ದಾರೆ. ಅಣ್ಣ ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಆಚಾರವೇ ಸ್ವರ್ಗ, ಅನಾಚಾರವೇ ನರಕ, ಅಯ್ಯ ಎಂದೊಡೆ ಸ್ವರ್ಗ, ಎಲವೋ ಎಂದೆಡೆ ನರಕ… ಹೀಗೆ ಬಸವತತ್ವದಲ್ಲಿ ನಂಬಿಕೆ ಇರಿಸಿಕೊಂಡು, ಬಾಳಿ, ಬದುಕಿ ಬಯಲಾದ ಶ್ರೀಗಳ ತತ್ವಸಿದ್ಧಾಂತಗಳು ಇಂದಿಗೂ ಜೀವಂತವಾಗಿವೆ.

ಸರಳ ಸಂತ, ವೈರಾಗ್ಯ ನಿಧಿ

ಜೇಬಿಲ್ಲದ ಶ್ವೇತ ವಸ್ತ್ರಧಾರಿಯ ಸರಳ ಸಂತ, ಲೌಕಿಕ ಜಗತ್ತಿನ ಮೋಹ, ವ್ಯಾಮೋಹಗಳ ಆಚೆಗಿನ ಅಲೌಕಿಕತೆಯ ನಿಜ ವೈರಾಗ್ಯ ನಿಧಿ, ನಡೆದಾಡುವ ದೇವ ಸಿದ್ದೇಶ್ವರ ಶ್ರೀಗಳು ಭಕ್ತರ ಮನದಲ್ಲಿ ಉಸಿರಾಗಿ ನಿಂತವರು.

12ನೇ ಶತಮಾನದ ಬಸವಾದಿ ಪ್ರಮಥರ ಅನುಯಾಯಿಗಳಾಗಿದ್ದ ಸಿದ್ದೇಶ್ವರ ಶ್ರೀಗಳು, ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಪರಮ ಶಿಷ್ಯರಾಗಿದ್ದರು. ಜ್ಞಾನಯೋಗಾಶ್ರಮದ ಜ್ಞಾನಗುರುವಾಗಿ ಅನೇಕ ಭಕ್ತರಿಗೆ ಅರಿವಿನ ಹಿತೋಪದೇಶ ನೀಡಿದವರು. ಪ್ರತಿ ಶ್ರಾವಣ ಮಾಸದ ತಿಂಗಳಲ್ಲಿ ಪ್ರವಚನ ಸಂಚಾರಿಯಾಗಿ, ಕೋಟ್ಯಾನುಕೋಟಿ ಭಕ್ತರಿಗೆ ಕಾಯಕ ಮಹತ್ವ ತಿಳಿ ಹೇಳಿದ ಆಧ್ಯಾತ್ಮಕ ಜೀವಿ.

ದೇವರೆಂಬುದು ಗುಡಿಯಲಿಲ್ಲ. ಪ್ರಕೃತಿಯ ಮಡಿಲಲ್ಲಿ ದುಡಿಮೆಯ ಬೆವರಲ್ಲಿ ಇರುವನು ಎಂದು ಹೇಳುತ ದೇವರನ್ನು ಕಂಡವರು. ಸಿದ್ದೇಶ್ವರ ಶ್ರೀಗಳು ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ಸಾಕ್ರೆಟಿಸ್, ಪ್ಲೇಟೋ, ಅರಿಸ್ಟಾಟಲ್, ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಬಸವಾದಿ ಶರಣರ ವಚನದೀಪ್ತಿಯಲ್ಲಿ ತಮ್ಮ ಅರಿವಿನ ವಿಸ್ತರವನ್ನು ಭಕ್ತರ ಮನೆ, ಮನಕ್ಕೆ ಹರಿಬಿಟ್ಟವರು. ಶ್ರೀಗಳ ಭಾಷಣ, ಪ್ರವಚನದಲ್ಲಿ ಕಾಯಕ ಸಿದ್ದಾಂತದ, ಪ್ರಖರ ಸಕಾರಾತ್ಮಕ ಚಿಂತನೆಗಳು ಇರುತ್ತಿದ್ದವು. ರೈತರ ಬಗ್ಗೆ ಕೂಲಿ ಕಾರ್ಮಿಕರ ಬಗ್ಗೆ, ದೀನ, ದಲಿತರ ಬಗ್ಗೆ ಅವರು ನುಡಿದಷ್ಟು ದುಡಿದಷ್ಟು ಬೇರೆ ಯಾರೂ ದುಡಿದಿಲ್ಲ. ಶ್ರೀಗಳು ಮಾತೃ ಹೃದಯಿಗಳು ಆಗಿದ್ದರು.

ಜ್ಞಾನಯೋಗಾಶ್ರಮದ ಒಂದು ಅಕ್ಕಿಕಾಳನ್ನು ತಮಗಾಗಿ ಎತ್ತಿಟ್ಟುಕೊಳ್ಳಲಿಲ್ಲ. ‘ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ’ ಹೀಗೆ ತಮ್ಮ ಬದುಕನ್ನು ಸನ್ಮಾರ್ಗದಲ್ಲಿ ಕೊಂಡೊಯ್ದು, ನರನಿಂದ ಹರನ ಸ್ಥಾನಕ್ಕೆ ಎರಿದವರು. ಹೀಗಾಗಿಯೇ ಅವರನ್ನು ಭಕ್ತರು ನಡೆದಾಡುವ ದೇವರೆಂದು ಕರೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!