ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರು 10 ದಿನಗಳ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಜ್ಜಾಗಿದ್ದು, ಇಂದು ಗುರುವಾರ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಳೆದ ವರ್ಷ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರಳ ಮಟ್ಟದಲ್ಲಿ ಆಚರಣೆಗೆ ಮುಂದಾಗಿತ್ತು. ಆದರೆ, ಈ ವರ್ಷ ರಾಜ್ಯಾದ್ಯಂತ ಸಾಕಷ್ಟು ಮಳೆಯಿಂದ ಜಲಾಶಯಗಳು ತುಂಬಿದ ನಂತರ ಸರ್ಕಾರವು ಅದ್ಧೂರಿ ಉತ್ಸವಗಳನ್ನು ಘೋಷಿಸಿದ್ದು, ಪರಿಸ್ಥಿತಿ ಉತ್ತಮವಾಗಿ ಬದಲಾಗಿವೆ.
ರಾಜ್ಯ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಕತ್ವದ ಹೊರತಾಗಿ ಆಚರಣೆಗೆ 40 ಕೋಟಿ ರೂಪಾಯಿ ಈ ಬಾರಿ ಖರ್ಚು ಮಾಡುತ್ತಿದೆ. ಇಂದು ಬೆಳಗ್ಗೆ 9:15 ರಿಂದ 9:45 ರ ನಡುವಿನ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಾಹಿತಿ ಮತ್ತು ವಿದ್ವಾಂಸ ಹಂಪ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.ಈಗಾಗಲೇ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಬೃಹತ್ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ತಾಯಿ ಚಾಮುಂಡಿ ಉತ್ಸವ ಮೂರ್ತಿ ಶುದ್ಧೀಕರಣ ಮಾಡಲಾಗಿದ್ದು ಕೆಂಪು ಬಣ್ಣದ ಸೀರೆಯಲ್ಲಿ ತಾಯಿ ಕಂಗೋಳಿಸುತ್ತಿದ್ದಾಳೆ. ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕ ಮಾಡಿದ ಬಳಿಕ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನ ಮಾಡಲಾಗುತ್ತದೆ. ಈ ಮೂಲಕ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾದ ಧಾರ್ಮಿಕ ಕಾರ್ಯಗಳು ಆರಂಭವಾಗುತ್ತದೆ.