August 12, 2026
Wednesday, August 12, 2026
spot_img

ಇಂದು ಭೀಮನ ಅಮಾವಾಸ್ಯೆ: ಏನಿದರ ವಿಶೇಷತೆ, ಆಚರಣೆಯ ಹಿಂದಿರುವ ಮಹತ್ವ ಗೊತ್ತಾ?

ಆಷಾಢ ಮಾಸದ ಕೊನೆಯ ದಿನವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿ ಆಚರಿಸಲಾಗುತ್ತದೆ. ಅದೇ ‘ಭೀಮನ ಅಮಾವಾಸ್ಯೆ’. ಇದನ್ನು ‘ಜ್ಯೋತಿರ್ಭೀಮೇಶ್ವರ ವ್ರತ’ ಅಥವಾ ‘ಪತಿ ಸಂಜೀವಿನಿ ವ್ರತ’ ಎಂದೂ ಕರೆಯಲಾಗುತ್ತದೆ. ನವವಿವಾಹಿತೆಯರು, ಮುತ್ತೈದೆಯರು ಮತ್ತು ಅವಿವಾಹಿತ ಯುವತಿಯರು ಈ ದಿನ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶಿವ-ಪಾರ್ವತಿಯರನ್ನು ಆಚರಿಸುತ್ತಾರೆ.

ಆಚರಣೆಯ ಹಿಂದಿರುವ ಮಹತ್ವ

ಭೀಮನ ಅಮಾವಾಸ್ಯೆಯು ಪ್ರಮುಖವಾಗಿ ದಾಂಪತ್ಯ ಜೀವನದ ಯೋಗಕ್ಷೇಮವನ್ನು ಸಾರುವ ಹಬ್ಬವಾಗಿದೆ. ಮುತ್ತೈದೆಯರು ತಮ್ಮ ಪತಿಯ ಆರೋಗ್ಯ, ಐಶ್ವರ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅವಿವಾಹಿತ ಯುವತಿಯರು ತಮಗೆ ಒಳ್ಳೆಯ  ಪತಿ ಸಿಗಲಿ ಎಂದು ಹಾರೈಸಿ ಈ ವ್ರತವನ್ನು ಮಾಡುತ್ತಾರೆ. ಇಡೀ ಕುಟುಂಬದ ಒಳಿತಿಗಾಗಿ ಶಿವ-ಪಾರ್ವತಿಯರನ್ನು ಕೃತಜ್ಞತೆಯಿಂದ ಪೂಜಿಸುವ ಸುದಿನ ಇದಾಗಿದೆ.

ಪುರಾಣದ ಕಥೆ ಏನು?

ಈ ಹಬ್ಬದ ಹಿಂದೆ ಒಂದು ಪ್ರಸಿದ್ಧ ಕಥೆಯಿದೆ. ಒಬ್ಬ ಬಡ ಬ್ರಾಹ್ಮಣನ ಮಗಳನ್ನು ವಿಧಿಯಿಲ್ಲದೆ ಸತ್ತುಹೋದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗುತ್ತದೆ. ಆದರೂ ಧೃತಿಗೆಡದ ಆ ಪತಿವ್ರತೆ, ಆಷಾಢ ಅಮಾವಾಸ್ಯೆಯ ದಿನ ಮಣ್ಣಿನಿಂದ ಶಿವ-ಪಾರ್ವತಿಯ ವಿಗ್ರಹಗಳನ್ನು ಮಾಡಿ, ಭಕ್ತಿಯಿಂದ ಪೂಜಿಸುತ್ತಾಳೆ. ಆಕೆಯ ಪತಿಭಕ್ತಿ ಮತ್ತು ಕಠಿಣ ಶ್ರದ್ಧೆಗೆ ಮೆಚ್ಚಿದ ಈಶ್ವರನು ಪ್ರತ್ಯಕ್ಷನಾಗಿ, ಸತ್ತ ರಾಜಕುಮಾರನಿಗೆ ಮರುಜೀವ ನೀಡುತ್ತಾನೆ. ಆ ರಾಜಕುಮಾರನಿಗೆ ಭೀಮನಂತೆ ಗಟ್ಟಿಯಾದ ಆಯುಷ್ಯವನ್ನು ದಯಪಾಲಿಸಿದ್ದರಿಂದ, ಈ ಹಬ್ಬಕ್ಕೆ ‘ಭೀಮನ ಅಮಾವಾಸ್ಯೆ’ ಎಂಬ ಹೆಸರು ಬಂದಿತು.

ಜೋತಿರ್ಭೀಮೇಶ್ವರ ಪೂಜೆ:

ಮಣ್ಣಿನಿಂದ ಮಾಡಿದ ಎರಡು ದೀಪಸ್ತಂಭಗಳನ್ನು ತಂದು ಶಿವ-ಪಾರ್ವತಿಯರ ಪ್ರತೀಕವಾಗಿ ಭಾವಿಸಿ ವಿಶೇಷ ಪೂಜೆ ಮಾಡಲಾಗುತ್ತದೆ. ಒಂಬತ್ತು ಗಂಟುಗಳಿರುವ ಪೂಜೆಯ ಗಿಡದ ದಾರವನ್ನು (ರಕ್ಷಾಸೂತ್ರ) ದೇವರಿಗೆ ಇಟ್ಟು ಪೂಜಿಸಿ, ನಂತರ ಮಹಿಳೆಯರು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಅಕ್ಕಿ ತರಿ ಮತ್ತು ಉದ್ದಿನಬೇಳೆ ಹಿಟ್ಟಿನಿಂದ ಮಾಡಿದ ‘ಕಡಬು’ಗಳನ್ನು ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಪೂಜೆಯ ನಂತರ ಮನೆಯ ಗಂಡು ಮಕ್ಕಳಿಂದ ಈ ಕಡಬುಗಳನ್ನು ಒಡೆಯಿಸಲಾಗುತ್ತದೆ. ಇದನ್ನು ಭೀಮನು ಕಲ್ಯಾಣಿ ಒಡೆದ ಸಂಕೇತ ಎನ್ನಲಾಗುತ್ತದೆ. ವಿವಾಹಿತ ಮಹಿಳೆಯರು ಪತಿಯ ಪಾದ ತೊಳೆದು ಆಶೀರ್ವಾದ ಪಡೆಯುತ್ತಾರೆ. ಪತಿಯನ್ನು ಈಶ್ವರನ ಸ್ವರೂಪ ಎಂದು ಭಾವಿಸಿ ಗೌರವಿಸುವ ಸಂಪ್ರದಾಯ ಇದಾಗಿದೆ.

ಭೀಮನ ಅಮಾವಾಸ್ಯೆಯು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಜೀವನದ ಪ್ರೀತಿ, ಗೌರವ ಮತ್ತು ಕೌಟುಂಬಿಕ ಭದ್ರತೆಯನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !