ಇಂದು ಮಹಾಲಯ ಅಮಾವಾಸ್ಯೆ. ಈ ದಿನ ನಮ್ಮ ಪೂರ್ವಜರನ್ನು ನೆನೆದು, ಅವರಿಗೆ ಕೃತಜ್ಞತೆ ಹೇಳುವ ಸಮಯವಾಗಿದೆ. ಮಹಾಲಯ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ಪಿತೃಪಕ್ಷದ ಕೊನೆಯ ಹಾಗೂ ಅತ್ಯಂತ ಪ್ರಮುಖವಾದ ದಿನವಾಗಿದೆ. ಈ ದಿನ ಇಹಲೋಕ ತ್ಯಜಿಸಿದ ಎಲ್ಲ ಪೂರ್ವಜರನ್ನು ಸ್ಮರಿಸಿ ಅವರಿಗೆ ತಿಲ ತರ್ಪಣ ಹಾಗೂ ಪಿಂಡಪ್ರದಾನ ಮಾಡಲಾಗುತ್ತದೆ. ಹಲವರು ಈ ದಿನದಂದು ಮನೆಯಲ್ಲಿಯೇ ತಮ್ಮ ಹಿರಿಯರ ಫೋಟೊಗಳು ಹಾಗೂ ಕಳಸವನ್ನು ಇಟ್ಟು, ಅವರಿಗೆ ಇಷ್ಟವಾಗುವ ಆಹಾರ, ಅಡುಗೆಯನ್ನು ಮಾಡಿ ಉಣಬಡಿಸುತ್ತಾರೆ. ಈ ಸಮಯದಲ್ಲಿ ಅವರು ಮನೆಗೆ ಬಂದು ಊಟ ಮಾಡಿ ಹೋಗುತ್ತಾರೆ ಎಂದು ನಂಬಲಾಗಿದೆ.
ಈ ದಿನದ ನಂತರ ಅಂದರೆ ನಾಳೆಯಿಂದ ನವರಾತ್ರಿ ಅಂದರೆ ದೇವೀ ಪಕ್ಷ ಆರಂಭವಾಗುತ್ತದೆ. ದುರ್ಗಾದೇವಿಯನ್ನು ಸ್ವಾಗತಿಸುವ ಕಾರ್ಯಗಳು ಆರಂಭವಾಗುತ್ತವೆ.
ಹಿಂದೂ ಪಂಚಾಂಗದ ಪ್ರಕಾರ ಪಿತೃಪಕ್ಷಕ್ಕೆ ಮಹತ್ವದ ಸ್ಥಾನವಿದ್ದು, ಇದರ ಕೊನೆಯ ದಿನವಾದ ಸರ್ವಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯು ಈ ಬಾರಿ ವಿಶೇಷ ಶುಭ ಯೋಗಗಳನ್ನು ಹೊತ್ತು ತರುತ್ತಿದೆ. 2026ರ ಈ ಮಹಾಲಯ ಅಮಾವಾಸ್ಯೆಯಂದು ಆಕಾಶಮಂಡಲದಲ್ಲಿ ನಿರ್ಮಾಣವಾಗುತ್ತಿರುವ ವಿಶಿಷ್ಟ ಗ್ರಹಗತಿಗಳ ಸಂಯೋಜನೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಪಿತೃಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವುದರ ಜೊತೆಗೆ, ನೂತನ ಶುಭ ಯೋಗಗಳ ಪ್ರಭಾವದಿಂದಾಗಿ ಬಹುತೇಕ ರಾಶಿಯವರ ಜೀವನದಲ್ಲಿ ಆರ್ಥಿಕ, ವೃತ್ತಿಪರ ಹಾಗೂ ಕೌಟುಂಬಿಕ ದೃಷ್ಟಿಯಿಂದ ಹಲವು ಸಕಾರಾತ್ಮಕ ಬದಲಾವಣೆಗಳು ಗೋಚರಿಸಲಿವೆ.
ಮಹಾಲಯ ಅಮಾವಾಸ್ಯೆ ಕಥೆ ಏನು?
ಈ ಹಿಂದೆ ಮಹಾಭಾರತದ ಸಮಯದಲ್ಲಿ ಕರ್ಣ ಎಲ್ಲವನ್ನು ದಾನ ಮಾಡುತ್ತಿದ್ದ. ನಿರ್ಗತಿಕರಿಗೆ ಬಂಗಾರ, ಬೆಳ್ಳಿ ಹಾಗೂ ಸಂಪತ್ತನ್ನು ನೀಡುತ್ತಿದ್ದನು. ತದನಂತರ ಕರ್ಣ ಸ್ವರ್ಗವನ್ನು ಸೇರಿದಾಗ ಅಲ್ಲಿ ಎಲ್ಲಿಯೂ ಕರ್ಣನಿಗೆ ಆಹಾರವೇ ಸಿಗಲಿಲ್ಲ. ನಾನು ಜೀವನದಲ್ಲಿ ಏನೆಲ್ಲಾ ದಾನವನ್ನು ಮಾಡಿದರೂ ಸ್ವರ್ಗದಲ್ಲಿ ತಿನ್ನಲು ತನಗೆ ಆಹಾರವೇ ಇಲ್ಲದುದನ್ನು ಕಂಡು ಕರ್ಣನಿಗೆ ಆಶ್ಚರ್ಯವಾಗಿತ್ತು. ಆಗ ಇಂದ್ರನು ಕರ್ಣನಿಗೆ ನೀವು ಭೂಮಿಯಲ್ಲಿದ್ದಾಗ ಬಂಗಾರ, ಬೆಳ್ಳಿ ದಾನ ಮಾಡಿದ್ದೀರಿ ಆದರೆ ಯಾರಿಗೂ ಅನ್ನದಾನ ಮಾಡಿಲ್ಲ. ನಿಮ್ಮ ಹಿರಿಯರಿಗೆ ತರ್ಪಣ ನೀಡಿಲ್ಲ ಎಂದು ಹೇಳಿದರು. ತದನಂತರ ಇಂದ್ರನು ಕರ್ಣನಿಗೆ ಕೇವಲ 15 ದಿನಗಳ ಕಾಲ ಭೂಮಿಗೆ ವಾಪಸ್ ಹೋಗಿ, ತನ್ನ ಪೂರ್ವಜರ ನೆನಪಿನಲ್ಲಿ ಶ್ರಾದ್ಧ ಮತ್ತು ತರ್ಪಣವನ್ನು ನೀಡಿ ಅನ್ನ-ನೀರು ದಾನ ಮಾಡಲು ಅವಕಾಶ ಕಲ್ಪಿಸಿದನು. ಈ ಸಮಯವನ್ನು ಪಿತೃಪಕ್ಷವಾಗಿ ಆಚರಿಸಲಾಗುತ್ತದೆ.



