ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಧರ್ಮಗ್ರಂಥಗಳಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವ ಇದೆ. ಸೂರ್ಯ, ಚಂದರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭೂಮಿಯ ಕೆಲ ಭಾಗಗಳಲ್ಲಿ ಕತ್ತಲೆ ಆವರಿಸಲಿದೆ. 2025ರ ಮೊದಲ ಸೂರ್ಯಗ್ರಹಣ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ಇಂದು ಸಂಭವಿಸಲಿದೆ.
ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಹಾದುಹೋದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಒಂದು ಭಾಗ ಮಾತ್ರ ಆವರಿಸುತ್ತದೆ. ಆಗ ಆಕಾಶದಲ್ಲಿ ಭಾಗಶಃ ಸೂರ್ಯನನ್ನು ಕಾಣಬಹುದಾಗಿದೆ. ಸೂರ್ಯನ ಉಳಿದ ಭಾಗ ಕತ್ತಲೆಯಿಂದ ಆವರಿಸಿರುತ್ತದೆ.
ಇಂದು ಮಧ್ಯಾಹ್ನ 2.21ರಿಂದ ಸಂಜೆ 6.14ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈಶಾನ್ಯ ಅಮೆರಿಕ ಹಾಗೂ ಕೆನಡಾದ ಕೆಲ ಭಾಗಗಳಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ನ್ಯೂಯಾರ್ಕ್ ನಗರ, ಬೋಸ್ಟನ್, ಮಾಂಟ್ರಿಯಲ್ ಮತ್ತು ಕ್ವಿಬೆಕ್, ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಸಹ ಭಾಗಶಃ ಗ್ರಹಣ ಗೋಚರವಾಗಲಿದೆ.
ಎರಡು ಗಂಟೆಗಳ ಕಾಲ ಈ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಇಂದಿನ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಇಂದು ಯಾವುದೇ ಮುನ್ನೆಚ್ಚರಿಕೆ ಅಥವಾ ಪರಿಹಾರಗಳನ್ನು ಮಾಡುವ ಅಗತ್ಯವಿಲ್ಲ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡುವಂತೆ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸಬಾರದು. ಇದರಿಂದ ರೆಟಿನಾ ಸುಟ್ಟುಹೋಗುದಲ್ಲದೇ ಕಣ್ಣಿನ ಹಾನಿಗೆ ಕಾರಣವಾಗಬಹುದು. ಸೂರ್ಯಗ್ರಹಣವನ್ನು ನೋಡುವುದಾದರೆ ಮೊದಲು ಕಣ್ಣಿನ ರಕ್ಷಣೆ ಅಗತ್ಯವಾಗಿದೆ. ಸಾಮಾನ್ಯವಾಗಿ ಸನ್ ಗ್ಲಾಸ್, ಕಲರ್ ಪ್ಲಾಸ್ಟಿಕ್ಗಳು, ಎಕ್ಸ್ ರೇಗಳಿಂದ ಅಥವಾ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡ ಅನುಸರಿಸುವ ಸೌರ ವೀಕ್ಷಕಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡಬಹುದಾಗಿದೆ.