Wednesday, October 5, 2022

Latest Posts

ದೇಶ ಪ್ರೇಮಿಗಳ ತ್ಯಾಗ- ಬಲಿದಾನಗಳ ಫಲವೇ ಇಂದಿನ ಸ್ವಾತಂತ್ರ್ಯ: ಗೋವಿಂದ ಕಾರಜೋಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ಬ್ರಿಟಿಷರ ದುರಾಡಳಿತವನ್ನು ಅಂತ್ಯಗೊಳಿಸಲು ಮತ್ತು ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದ್ದ ಲಕ್ಷಾಂತರ ದೇಶಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ರಾಜ್ಯದ ಬೃಹತ್ ಮತ್ತು ಮಾಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಕಾರ್ಯಾಲಯದಲ್ಲಿ ಇಂದು ಬೆಳಿಗ್ಗೆ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶದ ಉದ್ದಗಲಕ್ಕೂ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ಇದನ್ನು ಸಂಭ್ರಮದಿಂದ ಆಚರಿಸಬೇಕು ಎಂಬ ಉದ್ದೇಶದಿಂದ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಅಭಿಯಾನವನ್ನೇ ಆರಂಭಿಸಿದ್ದಾರೆ. ಇಂದು ದೇಶದ ಸುಮಾರು 20 ಕೋಟಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಾಡುತ್ತಿದೆ ಎಂದರು.
ಈ ಸಂಭ್ರಮವನ್ನು ನಮ್ಮ ಯುವಕರು ಮತ್ತು ಹಿರಿಯರು ಸೇರಿ ಆಚರಿಸುತ್ತಿದ್ದಾರೆ. ಪ್ರತಿಯೊಬ್ಬರ ಮನೆಯ ಮೇಲೆ 13ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ. ದೇಶಕ್ಕಾಗಿ ತಮ್ಮ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡವರ ಹಾಗೂ ಹೋರಾಟ ಮಾಡಿದ ಎಲ್ಲ ಮಹನೀಯರನ್ನು ನಾವಿಂದು ಸ್ಮರಿಸಬೇಕು ಎಂದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಸಮರ್ಪಕ ಹಾದಿಯಲ್ಲಿದೆ. ನಮ್ಮ ನೆರೆಯ ದೇಶಗಳಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ; ಪ್ರಜೆಗಳು ದಂಗೆಯೆದ್ದು ಸಾರ್ವಜನಿಕ ಆಸ್ತಿ ಹಾನಿ ಮಾಡುತ್ತಿದ್ದಾರೆ. ಸರಕಾರಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ. ಇಂಥ ದುರಂತ ನಮ್ಮ ನೆರೆಯ ರಾಷ್ಟ್ರಗಳಲ್ಲಿದೆ ಎಂದು ತಿಳಿಸಿದರು.
ಭಾರತದಲ್ಲಿ ಶೇ 50ಕ್ಕೂ ಹೆಚ್ಚು ವಿದ್ಯಾವಂತ ಯುವಕರಿದ್ದಾರೆ. ದೇಶದ ಪ್ರಗತಿ, ಏಳಿಗೆಗೆ ಹಾಗೂ ದೇಶವನ್ನು ಹಿರಿಯಣ್ಣನ ಸ್ಥಾನಕ್ಕೆ ಒಯ್ಯಲು ಎಲ್ಲ 130 ಕೋಟಿ ಜನರೂ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಪ್ರಪಂಚವೇ ಮೆಚ್ಚುವಂಥ ಆಡಳಿತ ನೀಡುವ ಜೊತೆಗೆ ದೇಶದ ಏಕತೆ, ಐಕ್ಯತೆ ಮತ್ತು ಭದ್ರತೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ತಿಳಿಸಿದರು. ಅಮೃತ ಮಹೋತ್ಸವವನ್ನು ಜಗತ್ತೇ ಮೆಚ್ಚುವ ಮಾದರಿಯಲ್ಲಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!