ದಿಗಂತ ವರದಿ ಸುರತ್ಕಲ್:
ಮಾಜಿ ವಿಧಾನ ಪರಿಷತ್ ಸದಸ್ಯ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಸೂದ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ,
ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ಇವತ್ತು ಹಿಜಾಬ್ ಗೆ ಅವಕಾಶ ಕೇಳುತ್ತಿರುವವರು ನಾಳೆ ಬುರ್ಕಾ ವ್ಯವಸ್ಥೆಗೂ ಬೇಡಿಕೆ ಮಂಡಿಸುತ್ತಾರೆ. ಎಲ್ಲರೂ ವೈಯುಕ್ತಿಕ ಬೇಡಿಕೆ ಮಂಡಿಸುತ್ತಾ ಹೋದರೆ ಶಿಕ್ಷಣ ಪದ್ದತಿಯಲ್ಲಿ ಸಮಾನತೆ ಉಳಿಯುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.
ಸರಕಾರಿ ಶಿಕ್ಷಣದಲ್ಲಿ ಸರ್ವ ಧರ್ಮ ವ್ಯವಸ್ಥೆ ಇರುವಾಗ ಅದರಂತೆ ನಡೆದುಕೊಳ್ಳಲು ತಮ್ಮ ಮಕ್ಕಳಿಗೆ, ಸಮುದಾಯಕ್ಕೆ ಮೊದಲು ಬುದ್ದಿವಾದ ಹೇಳಿ. ಬಳಿಕ ಸಚಿವರನ್ನು, ಶಾಸಕರನ್ನು ನೋಡಿಕೊಳ್ಳಿ ಎಂದಿರುವ ಶಾಸಕರು ಸರಕಾರದ ಆದೇಶವನ್ನು ಸಮರ್ಥಿಸಿದ ರಲ್ಲದೆ, ಈ ಹಿಂದೆ ಉಚ್ಚ ನ್ಯಾಯಲಯ ನೀಡಿದ ಆದೇಶಗಳನ್ನೂ ಪರಿಶೀಲಿಸಿ ಹೇಳಿಕೆ ನೀಡಿ ಎಂದು ಸಲಹೆ ನೀಡಿದ್ದಾರೆ.
ಸಮುದಾಯವನ್ನು ದಾರಿ ತಪ್ಪಿಸುವ ಬದಲು ಸರಿದಾರಿಗೆ ತರಲು ಮುಂದಾಗಬೇಕಿದೆ ಅದನ್ನು ಬಿಟ್ಟು ವೃಥಾ ವಿವಾದಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಕಾರ್ಯಗಳು ಶೋಭೆಯಲ್ಲ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಅವರು ಎಚ್ಚರಿಸಿದ್ದಾರೆ.