ಹಿಜಾಬ್ – ಸರಕಾರದ ಸುತ್ತೋಲೆ ಪಾಲಿಸಬೇಕು: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಹಿಜಾಬ್ ಕುರಿತು ಕರ್ನಾಟಕ ಸರಕಾರ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಬಹಳ ಮುಖ್ಯ, ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಪರಿಪಾಲನೆ ಮಾಡಬೇಕು. ಯಾರೂ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದಿಲ್ಲಿ ಪ್ರವಾಸದಲ್ಲಿರುವ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಾಲೆ – ಕಾಲೇಜುಗಳಲ್ಲಿ ಯಾವ ರೀತಿ ವಸ ಸಂಹಿತೆ ಇರಬೇಕು ಎಂಬುದನ್ನು ಸಂವಿಧಾನ ಹಲವಾರು ವಿಚಾರಗಳಲ್ಲಿ ಹೇಳಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳಲ್ಲಿಯೂ ಸ್ಪಷ್ಟವಾಗಿದೆ. ಸರಕಾರ ಏನು ಮಾಡಬೇಕು, ಎಸ್‌ಡಿಎಂಸಿ ಮತ್ತು ಕಾಲೇಜು ಆಡಳಿತ ಮಂಡಳಿಗೆ ಏನು ಅಧಿಕಾರವಿದೆ ಇದೆಲ್ಲವೂ ಕಾಯ್ದೆಯಲ್ಲಿದೆ. ನಾಳೆ ಹೈಕೋರ್ಟ್‌ನಲ್ಲಿ ಇದರ ಬಗ್ಗೆ ವಿಚಾರಣೆ ನಡೆಯಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಬೇಕು, ಯಾರೂ ಶಾಂತಿ ಕದಡುವ ಕೆಲಸ ಮಾಡಬಾರದು ಎಂದರು.

ಎಲ್ಲ ರಾಜ್ಯಗಳಲ್ಲಿಯೂ ಚರ್ಚೆಯಾಗಿದ್ದೇ:
ಹಿಜಾಬ್ ವಿಚಾರ ಈ ಹಿಂದೆ ಕೇರಳದಲ್ಲಿಯೂ ದೊಡ್ಡ ಚರ್ಚೆಯಾಗಿತ್ತು, ಮಹಾರಾಷ್ಟ್ರದಲ್ಲಿಯೂ ಚರ್ಚೆಯಾಗಿತ್ತು. ಎಲ್ಲ ರಾಜ್ಯಗಳಲ್ಲಿ ಒಮ್ಮೆ ಚರ್ಚೆಯಾಗಿ, ಕೋರ್ಟ್ ಮೆಟ್ಟಿಲು ಹತ್ತಿ ತೀರ್ಮಾನಗಳಾಗಿದೆ. ಇಲ್ಲಿಯೂ ಹೈಕೋರ್ಟಿನ ಮುಂದೆ ಇದೆ, ನಾಳೆ ನ್ಯಾಯಮೂರ್ತಿಗಳು ಏನು ತೀರ್ಮಾನ ಮಾಡುತ್ತಾರೆ ಅಂತ ನೋಡೋಣ. ನಂತರ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ನದಿ ಜೋಡಣೆ: ರಾಜ್ಯದ ವಿಚಾರದಲ್ಲಿ ರಾಜಿಯಿಲ್ಲ
ನದಿ ಜೋಡಣೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನಾನು ನೀರಾವರಿ ಸಚಿವನಾಗಿದ್ದಾಗಲೂ ಡಿಪಿಆರ್ ಮಾಡುವಾಗ ಕರ್ನಾಟಕದ ಪಾಲು, ನಮ್ಮ ನದಿಪಾತ್ರದಲ್ಲಿ ಉತ್ಪಾದನೆಯಾಗುವ ನೀರು ಮತ್ತು ನಮ್ಮ ಬೇಡಿಕೆ, ಹಂಚಿಕೆಯ ಆಧಾರದಲ್ಲಿ ಮಾಡಬೇಕೆಂದು ಹೇಳಿದ್ದೆ. ಈಗಲೂ ಅದೇ ನಿಲುವು ಇದೆ. ಡಿಪಿಆರ್ ಅಂತಿಮ ಮಾಡುವ ಮೊದಲು ಎಲ್ಲ ರಾಜ್ಯಗಳೊಂದಿಗೆ ಸಮಾಲೋಚಿಸಬೇಕೆಂದು ಈಗಾಗಲೇ ಕೇಂದ್ರ ಕೂಡ ಹೇಳಿದೆ. ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ಪಾಲನ್ನು ಪಡೆದುಕೊಳ್ಳುವುದಕ್ಕೆ ಎಲ್ಲ ರೀತಿಯ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಈ ನದಿ ಜೋಡಣೆಯಿಂದ ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದ ಪ್ರಶ್ನೆ ಇರುವುದರಿಂದ ಹಾಗೂ ಇವೆರಡೂ ಜೀವನದಿಗಳಾಗಿರುವುದರಿಂದ ಈ ವಿಷಯದಲ್ಲಿ ನಾವು ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!