Tuesday, March 28, 2023

Latest Posts

ಇಂದಿನ ಫಲಿತಾಂಶ ವಿಶ್ವಕ್ಕೆ ಒಂದು ಸಂದೇಶ: ಈಶಾನ್ಯ ರಾಜ್ಯಗಳ ಗೆಲುವನ್ನು ಸಂಭ್ರಮಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ದೆಹಲಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರು , ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ಜನತೆಗೆ ಧನ್ಯವಾದ ತಿಳಿಸಿದರು.

ಈಶಾನ್ಯ ರಾಜ್ಯದ ಗೆಲುವನ್ನು ಕೊಂಡಾಡಿದ ಪ್ರಧಾನಿ ಮೋದಿ, ಸೇರಿದ ಜನರು ಈಶಾನ್ಯ ರಾಜ್ಯಗಳ ಜನರಿಗೆ ನಾವು ಗೌರವ ನೀಡಬೇಕಿದೆ. ಬಿಜೆಪಿಗೆ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟ ಜನರಿಗೆ ನೀವೆಲ್ಲಾ ಮೊಬೈಲ್ ಫ್ಲಾಶ್ ಲೈಟ್ ಹಾಕಿ ಗೌರವ ಸೂಚಿಸಬೇಕು ಎಂದರು. ಇದಕ್ಕೆ ಸೇರಿದ್ದ ಜನಸ್ತೋಮ ಫ್ಲಾಶ್ ಲೈಟ್ ಆನ್ ಮಾಡಿ ಗೌರವ ಸೂಚಿಸಿತು. ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ಜನತೆಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಶಿರಬಾಗಿ ನಮಿಸುತ್ತೇನೆ ಎಂದು ಮೋದಿ ಹೇಳಿದರು.

ಬಿಜೆಪಿ ಹಾಗೂ ನಮ್ಮ ಮಿತ್ರ ಪಕ್ಷಗಳಿಗೆ ಜನರು ಭರಪೂರ ಬೆಂಬಲ ನೀಡಿದ್ದಾರೆ. ಮೂರು ರಾಜ್ಯಗಳ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುವುದು ಅಷ್ಟು ಕಷ್ಟದ ಮಾತಲ್ಲ. ಆಧರೆ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೆಲಸ ಸುಲಭವಾಗಿರಲಿಲ್ಲ. ಕಠಿಣ ಪರಿಸ್ಥಿತಿಯಲ್ಲೂ ಸಾಧನೆ ಮಾಡಿದ್ದಾರೆ. ಇಂದಿನ ಫಲಿತಾಂಶ, ಭಾರತ ಹಾಗೂ ವಿಶ್ವಕ್ಕೆ ಒಂದು ಸಂದೇಶ ನೀಡಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಮನಸ್ಸು ಮಾಡಿದರೆ ಬದಲಾವಣೆ ತರುತ್ತಾರೆ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿವೆ. ಮೊದಲು ಈಶಾನ್ಯ ರಾಜ್ಯಗಳ ಕುರಿತು ದೇಶದಲ್ಲಿ ಚರ್ಚೆಯೇ ಆಗುತ್ತಿರಲಿಲ್ಲ. ಚರ್ಚೆ ನಡೆದರೂ, ಅದು ಹಿಂಸಾಚಾರ, ಗುಂಡಿನ ದಾಳಿ ಬಗ್ಗೆಯೇ ಚರ್ಚೆ ಆಗುತ್ತಿತ್ತು. ಆದರೆ, ಈಗ ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಿಷಯಕ್ಕಾಗಿ ಚರ್ಚೆಯಾಗುತ್ತಿದೆ. ಇದು ಪ್ರಜಾಪ್ರಭುತ್ವದ ಶಕ್ತಿ ಎಂದು ಕೊಂಡಾಡಿದರು.

ಮರ್‌ ಜಾ ಮೋದಿ ಎಂದು ಹೇಳುತ್ತಿದ್ದಾರೆ
ಕೆಲವೊಂದಿಷ್ಟು ಕುತ್ಸಿತ ಮನಸ್ಸಿನವರು ಮರ್‌ ಜಾ ಮೋದಿ ಎಂದು ಹೇಳುತ್ತಿದ್ದಾರೆ. ಆದರೆ, ಜನ ಮಾತ್ರ ಮತ್‌ ಜಾ ಮೋದಿ (ಹೋಗಬೇಡಿ ಮೋದಿ) ಎಂದು ಹೇಳುತ್ತಿದ್ದಾರೆ. ಜನ ನಿಂತು ನನ್ನನ್ನು ಬೆಂಬಲಿಸುತ್ತಿರುವಾಗ ಯಾರು ಏನು ಬೇಕಾದರೂ ಹೇಳಲಿ’ಎಂದರು. ಕೆಲ ದಿನಗಳ ಹಿಂದಷ್ಟೇ ಆಪ್‌ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮರ್‌ ಜಾ ಮೋದಿ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದರು.

ತ್ರಿಪುರಾದಲ್ಲಿ ಒಂದು ಕಾಲವಿತ್ತು. ಬಿಜೆಪಿ ಪಕ್ಷದ ಧ್ವಜ ಕೂಡ ಹಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆಧರೆ ಇದೀಗ ತ್ರಿಪುರಾದಲ್ಲಿ ಕಮಲ ಅರಳಿದೆ. ಈಶಾನ್ಯ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಇದಕ್ಕೆ ಕಾರಣ ಎಂದಿದ್ದಾರೆ. ಇದು ಹೊಸ ಆಲೋಚನೆಯ ಪ್ರತಿಬಿಂಬವಾಗಿದೆ. ಇಂದು ಈಶಾನ್ಯ ರಾಜ್ಯ ದಿಲ್ಲಿಯಿಂದ ದೂರವಿಲ್ಲ, ಹೃದಯದಿಂದಲೂ ದೂರವಿಲ್ಲ. ಕೆಲದಿನಗಳ ಹಿಂದೆ ಈಶಾನ್ಯ ರಾಜ್ಯಕ್ಕೆ ತೆರಳಿದ್ದೆ. ಹಲವರು ಹೇಳಿದ್ದರು. ನಿಮ್ಮ ಹಾಫ್ ಸೆಂಚುರಿಗೆ ಶುಭಾಶಯ ಎಂದಿದ್ದರು. ಇದೇನು ಎಂದು ಕೇಳಿದ್ದೆ? ನೀವು ಪ್ರಧಾನ ಮಂತ್ರಿಯಾದ ಬಳಿಕ 50ಕ್ಕೂ ಹೆಚ್ಚು ಬಾರಿ ಈಶಾನ್ಯ ರಾಜ್ಯಕ್ಕೆ ಆಗಮಿಸಿದ್ದೀರಿ. ಇದಕ್ಕಾಗಿ ಹಾಫ್ ಸೆಂಚುರಿಗೆ ಶುಭಾಶಯ ಎಂದರು. ಇದು ಶುಭಾಶಯದ ಮಾತಲ್ಲ, ಅಲ್ಲಿನ ಪ್ರಗತಿ, ಅಭಿವೃದ್ಧಿ ಜೊತೆಗೆ ಒಂದು ಭೇಟಿಯಿಂದ ಅಲ್ಲಿನ ಜನರ ಪ್ರೀತಿಯನ್ನು ಅವರ ಮಾತಿನಲ್ಲಿ ನೋಡಿದೆ ಎಂದರು.

ತುಂಬ ಜನರಿಗೆ ಬಿಜೆಪಿಯ ಗೆಲುವಿನ ಬಗ್ಗೆ ಕುತೂಹಲ ಮೂಡಿರಬಹುದು. ಒಂದಷ್ಟು ಜನ ವಿದ್ಯುನ್ಮಾನ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರಬಹುದು. ಆದರೆ, ಬಿಜೆಪಿ ಗೆಲುವಿನ ಗುಟ್ಟನ್ನು ನಾನು ಬಹಿರಂಗಪಡಿಸುತ್ತೇನೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ಪ್ರಯಾಸ್‌ ತತ್ವದ ಆಧಾರದ ಮೇಲೆ ನಾವು ಕೆಲಸ ಮಾಡುತ್ತೇವೆ. ನಾವು ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ನಾವು ಎಲ್ಲರ ಸೇವೆ ಮಾಡುತ್ತೇವೆ. ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಎಂಬುದು ನಮ್ಮ ಧ್ಯೇಯವಾಗಿದೆ. ನಮಗೆ ದೇಶ ಮೊದಲು, ದೇಶವಾಸಿಗಳು ಮೊದಲು ಎಂಬ ಉದ್ದೇಶವಿದೆ. ಇದಕ್ಕಾಗಿ ಜನ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಈಶಾನ್ಯ ರಾಜ್ಯಕ್ಕೆ ಇತರ ರಾಜ್ಯಗಳಷ್ಟೇ ಮಹತ್ವ ನೀಡಿದೆ. ಇಂದು ಹಲವರು ಬಿಜೆಪಿಯ ಯಶಸ್ವಿಗೆ ಕಾರಣ ಹುಡುಕುತ್ತಿದ್ದಾರೆ. ಬಿಜೆಪಿಯ ಗೆಲುವಿನ ದಾರಿ ಯಾವುದು ಎಂದು ಹುಡುಕಿ ಹುಡುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನು ಹೆಚ್ಚು ಟಿವಿ ನೋಡುವುದಿಲ್ಲ. ನನಗೆ ಗೊತ್ತಿಲ್ಲ, ಸದ್ಯ ಯಾರಾದರೂ ಇವಿಎಂ ಮೇಲೆ ಆರೋಪ ಮಾಡಿದ್ದಾರಾ?ಎಂದು ಮೋದಿ ಪ್ರಶ್ನಿಸಿದರು.

ನಮಗೆ ದೇಶ ಹಾಗೂ ದೇಶವಾಸಿ ಮೊದಲು
ಬಿಜೆಪಿ ಸರ್ಕಾರದ ಕಾರ್ಯ, ಬಿಜೆಪಿ ಸರ್ಕಾರ ಸಂಸ್ಕೃತಿ, ಬಿಜೆಪಿ ಸರ್ಕಾರದ ಕಾರ್ಯಕರ್ತರ ಸೇವಾ ಮನೋಭಾವ. ಈ ತ್ರೀವೇಣಿ ಸಂಗಮ ಬಿಜೆಪಿಯ ಗೆಲುವಿನ ಹಿಂದಿರುವ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಕೆಲಸ, ಯೋಜನೆಗಳಲ್ಲಿ ಯಾವುದೇ ಭೇದ ಭಾವ ಮಾಡಿಲ್ಲ. ನಾವು ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರೇರಣೆ,ಒಂದು ಭಾರತ ಹಾಗೂ ಶ್ರೇಷ್ಠ ಭಾರತ ಎಂದು ಮೋದಿ ಹೇಳಿದರು. ನಮಗೆ ದೇಶ ಹಾಗೂ ದೇಶವಾಸಿ ಮೊದಲು ಎಂದರು.

ಈಶಾನ್ಯ ರಾಜ್ಯದ ಮೂಲೆ ಮೂಲೆಗೆ ವಿದ್ಯುತ್ ನೀಡುವುದು, ನೀರು, ಗ್ಯಾಸ್ ಸಂಪರ್ಕ ಈ ಹಿಂದಿನ ಸರ್ಕಾರಕ್ಕೆ ಬೆಟ್ಟದಷ್ಟು ದೊಡ್ಡ ಸವಾಲಾಗಿತ್ತು. ಹೀಗಾಗಿ ಈ ಹಿಂದಿನ ಸರ್ಕಾರದಲ್ಲಿ ಇಂತಹ ಯಾವುದೇ ಆಲೋಚನೆ ಇರಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ನೀಡಿದೆ.ಸಂಪರ್ಕ ಸುಲಭವಾಗಿಸಿದೆ. ರೈಲು, ರಸ್ತೆ, ವಿಮಾನ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿದೆ. ಸುಲಫಭವಾಗಿ ದೇಶದ ಯಾವುದೇ ಮೂಲೆಗೆ ಕೆಲವೆ ಗಂಟೆಗಳಲ್ಲಿ ತಲುಪಲು ಸಾಧ್ಯವಾಗಲಿದೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!