ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮೆಟೋ ಬೆಲೆ ಗಗನಕ್ಕೇರಿದೆ. ಸಾರಿಲ್ಲದೆ ಊಟನೇ ಸೇರೋದಿಲ್ಲ ಎನ್ನೋರಿಗಾಗಿ ಈ ರೆಸಿಪಿ. ಅದೆಷ್ಟೋ ಮಂದಿಗೆ ಪ್ರತಿದಿನ ಊಟಕ್ಕೆ ಸಾರು ಬೇಕೇ ಬೇಕು. ಬೆಲೆಯೇರಿಕೆಯಿಂದಾಗಿ ಜನ ಟೊಮೆಟೋ ಖರೀದಿಗೆ ಹಿಂದೆಮುಂದೆ ನೋಡುವಂತಾಗಿದೆ. ಟೊಮ್ಯಾಟೋ ಇಲ್ಲದೆಯೂ ರುಚಿಕರ ಸಾರು ತಯಾರಿಸಬಹುದು. ಅದು ಹೇಗೆ ನೋಡೋಣ.
ಸಾರು ತಯಾರಿಸಲು ಒಂದು ಸ್ಟೀಲ್ ಪಾತ್ರೆಯನ್ನು ರೆಡಿಮಾಡಿ. ಅದಕ್ಕೆ ಎರಡು ಲೋಟ ನೀರು ಹಾಕಿ ನಿಂಬೆಹಣ್ಣಿನ ಗಾತ್ರದ ಹುಣಸೆ ಹಣ್ಣನ್ನು ಹಾಕಿ ಚೆನ್ನಾಗಿ ಕುದಿಸಿ ಆರಲು ಬಿಡಿ. ನಂತರ ಸೋಸಿ ಹುಣಸೆ ನೀರನ್ನು ಸಂಗ್ರಹಿಸಿಕೊಳ್ಳಿ. ಮತ್ತೆರಡು ಲೋಟ ನೀರು ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು, ಚಿಟಿಕೆ ಅರಶಿನ, ಸಣ್ಣಗಾತ್ರದ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಹಸಿಮೆಣಸು ಅಥವಾ ಸೂಜಿಮೆಣಸನ್ನು ಸೀಳಿ ಹಾಕಿ.
ಕಾಲು ಲೋಟ ನೀರು ತೆಗೆದುಕೊಂಡು ಇಂಗು ಹಾಕಿ ಸರಿಯಾಗಿ ಮಿಶ್ರಣಮಾಡಿಕೊಳ್ಳಿ. ಕುದಿಯುತ್ತಿರುವ ಪಾತ್ರೆಗೆ ಸೇರಿಸಿ. ಒಗ್ಗರಣೆ ಸೌಟಿನಲ್ಲಿ ಚಿಟಿಕೆ ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಹಾಗೂ ತೆಂಗಿನೆಣ್ಣೆ ಸೇರಿಸಿ ಒಗ್ಗರಣೆ ಕೊಡಿ. ಬಿಸಿ ಬಿಸಿ ಸಾರು ಅನ್ನದೊಂದಿಗೆ ಸವಿಯಲು ಬಲುರುಚಿ.