ಮಕ್ಕಳಿಗೆ ಕಾಡುತ್ತಿದೆ ಟೋಮೆಟೋ ಜ್ವರ: ಪೋಷಕರಿಗೆ ಕೇಂದ್ರದಿಂದ ಖಡಕ್‌ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಟೋಮೆಟೋ ಜ್ವರ ಪ್ರಕರಣ ತೀವ್ರಗೊಳ್ಳುತ್ತಿದ್ದು,  9 ವರ್ಷದೊಳಗಿನ 100 ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದೆ.

ಕೇರಳ, ತಮಿಳುನಾಡು, ಹರ್ಯಾಣ ಹಾಗೂ ಒಡಿಶಾದಲ್ಲಿ ಜ್ವರ ಪ್ರಮಾಣ ಹೆಚ್ಚಾಗಿದ್ದು, ಶಾಲೆಗೆ ತೆರಳು ಮಕ್ಕಳಲ್ಲಿ ಹೆಚ್ಚಾಗಿ ಟೋಮೆಟೋ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಪೋಷಕರಿಗೆ ಮಹತ್ವದ ಸಲಹೆ ನೀಡಿದೆ.

ಮುಖ್ಯವಾಗಿ ಮಕ್ಕಳು ಕೈ ಚೀಪುವುದನ್ನು ತಪ್ಪಿಸಲು ಸಲಹೆ ನೀಡಿದೆ. ಇಷ್ಟೇ ಅಲ್ಲ, ಜ್ವರ, ಗುಳ್ಳೆ, ವಾಂತಿ, ಮೈಕೈ ನೋವು, ಅತಿಸಾರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಹತ್ತಿರದ ವೈದ್ಯರ ಸಂಪರ್ಕಿಸಲು ಸೂಚಿಸಿದೆ.

ಜ್ವರ ನಿರ್ಲಕ್ಷ್ಯಿಸದಂತೆ ಎಚ್ಚರವಹಿಸಲು ಕೇಂದ್ರ ಆರೋಗ್ಯ ಇಲಾಖೆ ಪೋಷಕರಿಗೆ ಮಾರ್ಗಸೂಚಿ ಪ್ರಕಟಿಸಿದೆ. ಟೋಮೆಟೋ ಜ್ವರ ಕಾಣಿಸಿಕೊಂಡ ಮಗುವಿಗೆ ಚಿಗೂನ್ ಗೂನ್ಯ, ಡೆಂಗ್ಯೂ ಕಾಣಿಸಿಕೊಳ್ಳುವ ಸಾಧ್ಯತೆ. ಎಚ್ಚರ ವಹಿಸಬೇಕಾಗಿ ಸೂಚಿಸಲಾಗಿದೆ.

ಮೇ ತಿಂಗಳಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತದ ಮೊದಲ ಟೋಮೆಟೋ ಜ್ವರ ಪ್ರಕರಣ ಪತ್ತೆಯಾಗಿತ್ತು. ಜುಲೈ 26ರಕ್ಕೆ ಭಾರತದಲ್ಲಿ 5 ವರ್ಷದೊಳಗಿನ 86 ಮಕ್ಕಳಲ್ಲಿ ಟೋಮೆಟೋ ಜ್ವರ ಕಾಣಿಸಿಕೊಂಡಿತ್ತು.

ಕೇರಳ ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಕೇರಳದಲ್ಲಿ ಮಕ್ಕಳಲ್ಲಿ ಟೊಮೆಟೋ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗಡಿಭಾಗದಿಂದ ಆಗಮಿಸುವ ಪ್ರಯಾಣಿಕರಲ್ಲಿ ಅದರಲ್ಲೂ ಅಸೌಖ್ಯದಿಂದ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ಶುಚಿತ್ವ ಕಾಪಾಡಲು ಮನವಿ ಮಾಡಿದೆ. ವೈರಸ್ ಹರಡದಂತೆ ತಡೆಯಲು ತೀವ್ರ ಎಚ್ಚರ ವಹಿಸಬೇಕು. ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಂಪರ್ಕಿಸಲು ಕೋರಿದೆ.

1-5 ವಯೋಮಾನದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸೋಂಕು ಮೊದಲಿಗೆ ಸಣ್ಣ ಗುಳ್ಳೆಯ ರೂಪದಲ್ಲಿದ್ದು ಬಳಿಕ ಟೊಮೆಟೋ ಗಾತ್ರಕ್ಕೆ ತಿರುಗುತ್ತದೆ. ಹೀಗಾಗಿ ಇದನ್ನು ಟೊಮೆಟೋ ಜ್ವರ ಅಥವಾ ಟೋಮೆಟೋ ಫ್ಲೂ ಎಂದು ಕರೆಯಲಾಗುತ್ತದೆ.

ತೀವ್ರ ಜ್ವರ, ಮೈಕೈ ನೋವು, ಸಂದುಗಳಲ್ಲಿ ಊತ, ಆಯಾಸ, ಮೈಯಲ್ಲಿ ಗುಳ್ಳೆ ರೋಗ ಲಕ್ಷಣಗಳಾಗಿವೆ. ಕೆಲವರಿಗೆ ತಲೆಸುತ್ತು, ವಾಂತಿ, ಅತಿಸಾರ, ನಿರ್ಜಲೀಕರಣದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.ಇದರಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರು ವೈದ್ಯರ ತಪಾಸಣೆ ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯಲ್ಲಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!