ಹೊಸದಿಗಂತ ವರದಿ, ಹಾಸನ :
ಜಿಲ್ಲೆಯ ನಾನಾ ಭಾಗದಲ್ಲಿ ಬುಧವಾರ ಮಧ್ಯಾಹ್ನ ಸಿಡಿಲು ಹಾಗೂ ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತು.
ಜಿಲ್ಲೆಯ ನಾನಾ ಭಾಗದಲ್ಲಿ ಧಾರಾಕಾರ ಮಳೆ ಬಿದ್ದಿದ್ದು, ಜನಜೀವನ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತು. ಜಿಲ್ಲಾ ಕೇಂದ್ರ ಹಾಸನದಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೂ ಧಾರಾಕಾರ ಮಳೆ ಸುರಿದ ಪರಿಣಾಮ ಎನ್‌ಆರ್ ವೃತ್ತ,ಸಂತೆಪೇಟೆ ವೃತ್ತ, ಶಂಕರಮಠರಸ್ತೆ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿತ್ತು.
ಬೇಲೂರಿನಲ್ಲೂ ಸಂಜೆ ಧಾರಾಕಾರ ಮಳೆ ಸುರಿದಿದ್ದು,ಹೊಳೆನರಸೀಪುರದಲ್ಲಿಯೂ ಮಳೆ ಸುರಿದಿದೆ. ಸಕಲೇಶಪುರ, ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣದಲ್ಲಿ ದಟ್ಟ ಮೋಡಕವಿದ ವಾತಾವರಣವಿದ್ದು, ಯಾವುದೇ ಕ್ಷಣದಲ್ಲಿ ಮಳೆಯ ಸೂಚನೆ ನೀಡಿತ್ತು.
ಹಾಸನ-ಸಕಲೇಶಪುರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು,ಮಳೆ ಪರಿಣಾಮ ಸಂಚಾರ ದುಸ್ತರವಾಗಿದೆ. ಅರ್ಧ, ಮುಕ್ಕಾಲುಗಂಟೆಯ ಪ್ರಯಾಣ ಪ್ರಸ್ತುತ ಒಂದೂವರೆಯಿಂದ ಎರಡುಗಂಟೆ ತಗುಲುತ್ತಿದೆ. ಜಿಲ್ಲೆಯಲ್ಲಿ ಯತೇಚ್ಛವಾಗಿ ಜೋಳ ಬೆಳೆದಿದ್ದು, ಅದನ್ನು ಕೊಯ್ಲು ಮಾಡುವ ಸಂದರ್ಭದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ನಗರವು ಸೇರಿದಂತೆ ತಾಲೂಕಿನ ಸುತಮುತ್ತ ಬುಧವಾರ ಮಧ್ಯಾಹ್ನ ಭಾರೀ ಮಳೆಯೊಂದಿಗೆ ಗಾಳಿ ಹಾಗೂ ಗುಡುಗು ಮಿಂಚಿನ ಆರ್ಭಟ ಹೆಚ್ಚಾಗಿತ್ತು.
ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ಈ ಮಳೆ ತಂಪನ್ನೆರೆಯಿತು. ಜೋರಾಗಿ ಬೀಸಿದ ಗಾಳಿಗೆ ಅಲ್ಲಲ್ಲಿ ಕೆಲ ಮರಗಳು ಧರೆಗುರುಳಿದರೆ, ತಗ್ಗು ಪ್ರದರ್ಶಗಳ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿತ್ತು. ನಗರದ ರಸ್ತೆಯ ಬಳಿ ಚರಂಡಿಗಳಲ್ಲಿ ನೀರು ಭರ್ತಿಯಾಗಿ ರಸ್ತೆಯ ಮೇಲೆ ಹರಿಯುತ್ತಿತ್ತು. ಇದರಿಂದ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಅಲ್ಲದೆ ಸೆಸ್ಕ್‌ನವರು ವಿದ್ಯುತ್ ಕಡಿತಗೊಳಿಸಿದ್ದರಿಂದ ಜನರು ಕೆಲ ಕಾಲ ಪರದಾಡಬೇಕಾಯಿತು.
ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ನಗರದ ಬೂವನಹಳ್ಳಿ ವೃತದಲ್ಲಿ ಹಾಸನಾಂಬ ಉತ್ಸವದ ಅಂಗವಾಗಿ ಹಾಕಿದ್ದ ಸ್ವಾಗತ ಕಾಮಾನು ಮುರಿದು ಕಾರಿನ ಮೇಲೆ ಬಿದ್ದಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ವಿದ್ಯುತ್ ಕಂಬಗಳು, ಬೃಹತ್ ಗಾತ್ರದ ಮರಗಳು ನೆಲಕ್ಕುರಳಿವೆ. ಮತ್ತೊಂದೆಡೆ ವಾಸದ ಮನೆಗಳ ಮೇಲ್ಛಾವಣಿಗಳು ಗಾಳಿಗೆ ತೂರಿಕೊಂಡು ಹೋಗಿದ್ದು, ಇದರಿಂದ ಹಾನಿಗೊಳಗಾದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಹಾಸನಾಂಬ ದೇವಿಯ ದರ್ಶನ ಪಡೆಯಲು ಬಂದಿದ್ದ ಸಾವಿರಾರು ಭಕ್ತರು ಮಳೆಯಿಂದಾಗಿ ಸಂಕಷ್ಟ ಎದುರಿಸುವಂತಾಯಿತು. ಒಂದೇಡೆ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಭಾರಿ ಗಾಳಿ ಮಳೆಯಿಂದಾಗಿ ಸಂಪೂರ್ಣ ಒದ್ದೆಯಾಗಿ ಸ್ಥಳೀಯ ಅಂಗಡಿ ಮುಗ್ಗಟ್ಟುಗಳ ಆಶ್ರಯ ಪಡೆಯುವಂತಾಯಿತು. ಜರ್ಮನ್ ಟೆಂಟ್ ಅಡಿಯಲ್ಲಿ ನಿಂತಿದ್ದ ಭಕ್ತರು ಭಾರಿ ಗಾಳಿ ಭಿರುಸಿನ ಮಳೆಗೆ ಆತಂಕಕ್ಕೊಳಗಾರು. ದರ್ಶನ ಪಡೆದು ತಮ್ಮ ಮಾರ್ಗದತ್ತ ತೆರಳು ಹೊರಟವರು ಹಾಗೂ ಹಾಸನಾಂಬ ಉತ್ಸವದ ಬಿಗಿಭದ್ರತೆಗಾಗಿ ನಿಯೋಜಿಸಲಾಗಿದ್ದ ಪೋಲಿಸ್ ಸಿಬ್ಬಂಧಿಗಳು ಸಹ ಸಿಕ್ಕ ಅಂಗಡಿ ಮುಗ್ಗಟ್ಟುಗಳಲ್ಲಿ ಆಶ್ರಯ ಪಡೆಯಲು ಹರಸಹಾಸ ಪಟ್ಟರು.