ದಿಗಂತ ವರದಿ ವಿಜಯಪುರ:
ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆ ಇನ್ನಿಲ್ಲದ ಆವಾಂತರ ಸೃಷ್ಟಿಸಿದ್ದು, ನಗರದ ಕೆಲ ಬಡಾವಣೆ ಜನರು ಜಾಗರಣೆ ಮಾಡುವಂತಾಗಿದೆ.
ಮಳೆ ರಾತ್ರಿ 10 ಗಂಟೆಗೆ ಆರಂಭಗೊಂಡು ತಡರಾತ್ರಿವರೆಗೂ ಸುರಿದಿದ್ದು, ಇಲ್ಲಿನ ಇಬ್ರಾಹಿಂ ನಗರ ಬಡಾವಣೆ ಸಂಪೂರ್ಣ ಜಲಾವೃತಗೊಂಡು, ಮನೆಯೊಳಗೆ ನೀರು ನುಗಿದೆ. ಮನೆಯೊಳಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕಲು ನಿವಾಸಿಗಳು ಹರಸಾಹಸಪಟ್ಟಿದ್ದು, ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಅಲ್ಲದೆ ಮನೆಯಲ್ಲಿನ ದವಸ ಧಾನ್ಯ ಸೇರಿ ಇತರೆ ವಸ್ತುಗಳು ನೀರು ಪಾಲಾಗಿವೆ.
ಇಲ್ಲಿನ ಇಬ್ರಾಹಿಂ ನಗರಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಇಲ್ಲಿನ ಇಬ್ರಾಹಿಂಪುರ ರೇಲ್ವೆ ಸ್ಟೇಶನ್ ಕೂಡ ಮಳೆಗೆ ಜಲಾವೃತ್ತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ರೈತ ವರ್ಗ ಸಂತಸಗೊಂಡಿದ್ದು, ಕೃಷಿ ಚಟುವಟಿಕೆ ಸಿದ್ಧತೆಗೆ ಮುಂದಾಗಿದೆ.