ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಐಟಿ ಕಂಪನಿಯ ಆವರಣದಲ್ಲಿರುವ ಡೇಕೇರ್ ಕೇಂದ್ರವೊಂದರಲ್ಲಿ ಪುಟ್ಟ ಮಕ್ಕಳ ಮೇಲೆ ಅಮಾನವೀಯವಾಗಿ ಹಿಂಸೆ ನಡೆಸಿರುವ ಆರೋಪ ಬೆಳಕಿಗೆ ಬಂದಿದ್ದು, ಐವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಆಘಾತಕಾರಿ ಪ್ರಕರಣ ಬಹಿರಂಗವಾಗಿದೆ. ಇಲ್ಲಿ ಅಳುವ, ಮಾತು ಕೇಳದ ಎರಡು-ಮೂರು ವರ್ಷದ ಮಕ್ಕಳನ್ನು ಸಿಬ್ಬಂದಿ ವಾಷಿಂಗ್ ಮೆಷಿನ್‌ನೊಳಗೆ ಕೂರಿಸುವುದು, ಬಾತ್‌ರೂಮ್‌ನಲ್ಲಿ ಬೀಗ ಹಾಕಿ ಕೂಡಿಹಾಕುವುದು, ಪಾಶ್ಚಾತ್ಯ ಶೌಚಾಲಯದ ಮೇಲೆ ಕೂರಿಸುವುದು ಹಾಗೂ ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಬಾಯಿಗೆ ನೀರು ಸಿಂಪಡಿಸುವುದು ಸೇರಿದಂತೆ ಅಮಾನವೀಯ ಕೃತ್ಯಗಳನ್ನು ಎಸಗಿರುವ ಆರೋಪ ಕೇಳಿಬಂದಿದೆ.
ಮಕ್ಕಳ ಮೇಲಿನ ದೌರ್ಜನ್ಯದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಬಳಿಕ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ಮಕ್ಕಳ ಸಹಾಯವಾಣಿಗೆ ದೂರು ನೀಡಲಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಡೇಕೇರ್ ಕೇಂದ್ರದ ಐವರು ಸಿಬ್ಬಂದಿಯ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋಗಳ ಸತ್ಯಾಸತ್ಯತೆ, ಮಕ್ಕಳ ಮೇಲಿನ ಹಿಂಸೆಯ ಪ್ರಮಾಣ ಹಾಗೂ ಇನ್ನೂ ಹೆಚ್ಚಿನ ಮಕ್ಕಳು ಇದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಘಟನೆ ಬೆಳಕಿಗೆ ಬಂದ ಬಳಿಕ ಪೋಷಕರಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಡೇಕೇರ್ ಕೇಂದ್ರಗಳಲ್ಲಿ ಮಕ್ಕಳ ಮೇಲಿನ ನಿಗಾ ವ್ಯವಸ್ಥೆ ಮತ್ತು ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.



