ಹೊಸದಿಗಂತ ಹೊನ್ನಾವರ:
ಶರಾವತಿ ನದಿಯಲ್ಲಿ ಟೂರಿಸ್ಟ್ ಬೋಟ್ ಗಳಿಂದ ಪದೇಪದೇ ಅವಘಡಗಳು ಸಂಭವಿಸಿ ಪ್ರವಾಸಿಗರಲ್ಲಿ ಮತ್ತು ಸ್ಥಳಿಯರಲ್ಲಿ ಆತಂಕ ಉಂಟಾಗುತ್ತಿದೆ. ತಾಲೂಕಿನ ತನ್ಮಡಗಿ ಬಳಿ ಶರಾವತಿ ನದಿಯಲ್ಲಿ ಮತ್ತೆ ದುರ್ಘಟನೆ ನಡೆದಿದ್ದು, ಮೀನುಗಾರರ ದೋಣಿಗೆ ಟೂರಿಸ್ಟ್ ಬೋಟ್ ಒಂದು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.
ತನ್ಮಡಗಿಯ ವಾಮನ ಅಂಬಿಗ ಮತ್ತು ಅವರ ಪುತ್ರ ಸಮರ್ಥ ಅಂಬಿಗ ಇವರಿಬ್ಬರು ಮೀನುಗಾರಿಕೆ ದೋಣಿಯಲ್ಲಿ ಹೋಗುತ್ತಿದ್ದಾಗ. `ಶಬರೀಶ’ ಎನ್ನುವ ಟೂರಿಸ್ಟ್ ಬೋಟ್ ವೇಗವಾಗಿ ಬಂದು ದೋಣಿಗೆ ಡಿಕ್ಕಿ ಹೊಡೆದಿದೆ. ದೋಣಿಯಲ್ಲಿದ್ದ ವಾಮನ ಅಂಬಿಗ ನೀರಿನಲ್ಲಿ ಬಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಬೋಟ್ ಡಿಕ್ಕಿಯಾದ ಪರಿಣಾಮ ಸಮರ್ಥ ಇವರ ಎಡಗೈ ಭಾಗಕ್ಕೆ ಗಂಭೀರ ಗಾಯವಾಗಿದೆ. ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮೀನುಗಾರ ವಾಮನ ಅಂಬಿಗ ಮಾತನಾಡಿ, ಈ ಹಿಂದಿನಿಂದಲೂ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದೇವೆ. ಮಗನಿಗೆ ರಜೆ ಇರುದರಿಂದ ಮೀನು ಹಿಡಿಯುದನ್ನು ತೋರಿಸಲು ದೋಣಿಯಲ್ಲಿ ಹೋಗಿದ್ದೇವು. ಮೀನುಗಾರಿಕೆ ಮುಗಿಸಿ ಬರುವಾಗ ಹಿಂದಿನಿಂದ ಬೋಟ್ ಬಂದು ಡಿಕ್ಕಿಯಾಗಿದೆ. ಮಗನಿಗೆ ಪೆಟ್ಟಾಗಿದೆ. ಕೈ ಎತ್ತಲು ಆಗುವುದಿಲ್ಲ. ದುಡಿಮೆ ಮಾಡಿ ಜೀವನ ನಡೆಸಲು ಕಷ್ಟವಾಗಿದೆ. ಟೂರಿಸ್ಟ್ ಬೋಟ್ ಹಾವಳಿಗೆ ಕಡಿವಾಣ ಹಾಕಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.ಟೂರಿಸ್ಟ್ ಬೋಟ್ ಗಳು ನಿಯಮಪಾಲಿಸದೇ ಮೀನುಗಾರಿಕೆ ನಡೆಸಲು ಬಡ ಮೀನುಗಾರರಿಗೆ ತೊಂದರೆಯಾಗುತ್ತಿದ್ದು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.