ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಮಂಡಿ ಬಳಿ ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 31 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂದಿರ್ ಸಾಗರ್ ಚಂದರ್ ಅವರ ಪ್ರಕಾರ, ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿರುವ ಕಸೋಲ್‌ಗೆ ತೆರಳುತ್ತಿದ್ದ ಪ್ರವಾಸಿ ಬಸ್ ಇಂದು ಬೆಳಿಗ್ಗೆ 4:00 ಗಂಟೆ ಸುಮಾರಿಗೆ ಪಲ್ಟಿಯಾಗಿದೆ. ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಟ್ಟು 31 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರ್ಚೌಕ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಇತರ ಆರು ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ.