ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪ್ರಮುಖ ಆಕರ್ಷಣೆಯಾದ ಜೋಗ್ ಫಾಲ್ಸ್ ಅಥವಾ ಜೋಗ ಜಲಪಾತ ವೀಕ್ಷಣೆಗೆ ಎರಡೂವರೆ ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಜನವರಿ 1ರಿಂದ ಮಾರ್ಚ್ 15ರವರೆಗೆ ನಿರ್ಬಂಧಿಸಲಾಗಿದೆ. ಜೋಗ ಜಲಪಾತದ ಮುಖ್ಯದ್ವಾರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮನಮೋಹಕ, ಕಣ್ಮನ ಸೆಳೆಯುವ ಜೋಗ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಚಳಿಗಾಲ ಆಗಿದ್ದರಿಂದ ನೋಡಲು ಇನ್ನಷ್ಟು ಖುಷಿ ಕೊಡುತ್ತದೆ. ಹೀಗಾಗಿ ಶೈಕ್ಷಣಿಕ ಪ್ರವಾಸಕ್ಕಾಗಿ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಗ ಜಲಪಾತಕ್ಕೆ ಬರುವುದು ಸಾಮಾನ್ಯ.
ಈಗ ಜಲಪಾತದ ಮುಖ್ಯದ್ವಾರದ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಬೇಕಾದಂತ ಮೂಲ ಸೌಕರ್ಯದ ಕೆಲಸಗಳನ್ನು ಮಾಡಲಾಗುತ್ತಿದೆ. ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ ಅಂದರೆ ಒಟ್ಟು 74 ದಿನಗಳವರೆಗೆ ಸಾರ್ವಜನಿಕರ ಹಾಗೂ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.