ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹೆಮ್ಮೆಯ ನಟ ಯಶ್ ಅವರ ಮುಂಬರುವ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಮೇಲೆ ಕೋಟಿ ಕೋಟಿ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಗಾರವೇ ಯಶ್ ಅವರ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ರಾವಣನ ಪಾತ್ರಕ್ಕೆ ಪರಕಾಯ ಪ್ರವೇಶ
ಕಾರ್ಯಕ್ರಮದ ವೇಳೆ ರಾವಣನ ಪಾತ್ರದ ತಯಾರಿ ಬಗ್ಗೆ ಮಾತನಾಡಿದ ಯಶ್, “ಸೆಟ್‌ಗೆ ಕಾಲಿಟ್ಟು, ಭಾರವಾದ ದೊಡ್ಡ ಕಿರೀಟ ಧರಿಸುತ್ತಿದ್ದಂತೆ ನನಗೆ ಪಾತ್ರದ ಗಾಂಭೀರ್ಯ ಅರಿವಾಗುತ್ತಿತ್ತು. ಅದು ರಾವಣನಾಗಿ ಬದಲಾಗಲು ನನಗೆ ಪ್ರತಿದಿನ ಸಹಾಯ ಮಾಡುತ್ತಿತ್ತು” ಎಂದು ಹೇಳಿಕೊಂಡರು.
ದೊಡ್ಡ ಸ್ಪೀಕರ್, ಶಿವನ ಹಾಡುಗಳು!
ಚಿತ್ರೀಕರಣದ ಸಮಯದಲ್ಲಿ ತಾವು ಇಡೀ ಸೆಟ್‌ನ ವಾತಾವರಣವನ್ನೇ ಬದಲಿಸುತ್ತಿದ್ದ ಘಟನೆಯನ್ನು ಯಶ್ ನೆನಪಿಸಿಕೊಂಡರು. “ನಾನು ದೊಡ್ಡ ಸ್ಪೀಕರ್‌ಗಳನ್ನು ತರಿಸಿ, ಶಿವನ ಭಕ್ತಿಗೀತೆಗಳನ್ನು ಪೂರ್ಣ ವಾಲ್ಯೂಮ್‌ನಲ್ಲಿ ಹಾಕುತ್ತಿದ್ದೆ. ರಾವಣ ಶಿವನ ಪರಮ ಭಕ್ತ. ಹಾಗಾಗಿ ಆ ಭಾವನೆ (Trance) ಹಾಗೂ ಶಕ್ತಿಯಲ್ಲಿ ಇರಲು ಇದು ನೆರವಾಯಿತು. ಹಾಡಿನ ಸೌಂಡ್‌ಗೆ ಸೆಟ್‌ನಲ್ಲಿದ್ದವರೆಲ್ಲರೂ ಗಟ್ಟಿಯಾಗಿ ಕೂಗಿ ಮಾತನಾಡಬೇಕಾಗುತ್ತಿತ್ತು” ಎಂದು ತಮಾಷೆಯಾಗಿ ವಿವರಿಸಿದರು.
ರಣಬೀರ್ ಕಪೂರ್ ಮೆಚ್ಚುಗೆ
ಬಾಲಿವುಡ್ ನಟ ರಣಬೀರ್ ಕಪೂರ್ ಮಾತನಾಡಿ, “ನಾನಿನ್ನೂ ಯಶ್ ಜೊತೆ ದೃಶ್ಯಗಳಲ್ಲಿ ನಟಿಸಿಲ್ಲ. ಆದರೆ, ಯಶ್ ಪ್ಲೇ ಮಾಡುತ್ತಿದ್ದ ಸಂಗೀತವು ಇಡೀ ಸೆಟ್‌ನ ಶಕ್ತಿಯನ್ನೇ ಹೆಚ್ಚಿಸುತ್ತಿತ್ತು ಎಂದು ಶೂಟಿಂಗ್‌ನಲ್ಲಿದ್ದ ಪ್ರತಿಯೊಬ್ಬರೂ ಹೇಳುತ್ತಿದ್ದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



