ಹೊಸದಿಗಂತ ವರದಿ ಹಾವೇರಿ:
ರಾಜ್ಯ ಸರ್ಕಾರ ಪ್ರತಿ ಬಾರಿ ರೈತರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಇದನ್ನು ಖಂಡಿಸಿ ಮಾ.5ರಂದು ಟ್ರಾಕ್ಟರ್ ರ‍್ಯಾಲಿ ಮತ್ತು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಾಸ್ತಾ ರೋಖೊ ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾದ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಘೋಷಣೆ ಮಾಡಿ 6 ತಿಂಗಳೇ ಗತಿಸಿದರೂ ಇದುವರೆಗೂ ಬೆಳೆ ನಷ್ಟ ಪರಿಹಾರ ನೀಡಿಲ್ಲ. ಬರಕ್ಕೆ ಸಾಲಕ್ಕೆ ಹೆದರಿ ಇದುವರೆಗೂ 680 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹೋರಾಟದಲ್ಲಿ ಅಧಿವೇಶನಕ್ಕೂ ಮುನ್ನ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆ ಪರಿಹಾರ ಇನ್ನೂ ಸಿಕ್ಕಿಲ್ಲ. ಕೊಳವೆ ಬಾವಿ ಕೊರೆಸಿದವರಿಗೆ ಹೊಸ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ರೈತರ ಸಂಕಷ್ಟ ಹೆಚ್ಚಾಗಿದೆ, ಬದುಕು ದುರ್ಬರವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈವೇಳೆ ವಿವಿಧ ನಾಯಕರು ಇದ್ದರು.