ಹೊಸದಿಗಂತ ವರದಿ ಮಡಿಕೇರಿ:
ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ವಿಧಿಸಲಾಗಿದ್ದ ಸೆಕ್ಷನ್ 163ರ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜನವರಿ 7ರವರೆಗೂ ವಿಸ್ತರಿಸಿದೆ.
ಕಟ್ಟೆಮಾಡು ಗ್ರಾಮದ ಮಹಾ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವದ ಸಂದರ್ಭ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದ ಒಂದು ಜನಾಂಗದವರಿಗೆ ದೇವಾಲಯದ ಆಡಳಿತ ಮಂಡಳಿಯಲ್ಲಿರುವ ಮತ್ತೊಂದು ಜನಾಂಗದ ಕೆಲವರು ಉತ್ಸವದಲ್ಲಿ ಭಾಗವಹಿಸದಂತೆ ಅಡ್ಡಿಪಡಿಸಿದ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು.
ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ಒಂದು ಜನಾಂಗದವರು ದಕ್ಷಿಣಕೊಡಗಿನ ಪೊನ್ನಂಪೇಟೆಯಿಂದ ಕಟ್ಟೆಮಾಡು ದೇವಾಲಯದವರೆಗೆ ಜಾಥಾ ನಡೆಸಲು ಮುಂದಾಗಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟೆಮಾಡುವಿನ ದೇವಾಲಯದ ಸುತ್ತಮುತ್ತಲ 5 ಕಿ.ಮೀ.ವ್ಯಾಪ್ತಿಯನ್ನು ಜ.2ರ ಮುಂಜಾನೆ 6ಗಂಟೆಯವರೆಗೂ ನಿಷೇಧಿತ ಪ್ರದೇಶ ಎಂದು ಘೋಷಿಸಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.
ಈ ನಡುವೆ ಒಂದು ಜನಾಂಗದ ಜಾಥಾಕ್ಕೆ ಪೊಲೀಸರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳೂ ನಡೆದಿದ್ದವು. ವಿವಾದ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ದೇವಾಲಯ ಸಮಿತಿ, ಕೊಡವ ಹಾಗೂ ಗೌಡ ಸಮಾಜಗಳ ಪ್ರಮುಖರ ಶಾಂತಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಒಂದು ವಾರಗಳ ಕಾಲಾವಕಾಶ ನೀಡಿದೆ.
ಇದೀಗ ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆಯ ಅವಧಿ ಗುರುವಾರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಬೇಕಿತ್ತಾದರೂ, ಪರಿಸ್ಥಿತಿ ಇನ್ನೂ ತಿಳಿಯಾಗದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ನಿಷೇಧಾಜ್ಞೆಯ ಅವಧಿಯನ್ನು ಜ.7ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ 5 ಮಂದಿಗಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ಘೋಷಣೆ ಕೂಗುವಂತಿಲ್ಲ, ಪ್ರತಿಭಟನೆ, ಮೆರವಣಿಗೆ, ಜಾಥಾ ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಕೋರಿಕೆಯ ಮೇರೆಗೆ ನಿಷೇಧಾಜ್ಞೆಯ ಅವಧಿ ವಿಸ್ತರಣೆಯಾಗಿದ್ದು, ದೇವಾಲಯ ವ್ಯಾಪ್ತಿಯ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿರುತ್ತದೆ.
ಈ ನಡುವೆ ದೇವಾಲಯದ ಆಡಳಿತ ಸಮಿತಿ ಗುರುವಾರ ಕಟ್ಟೆಮಾಡುವಿನಲ್ಲಿ ಗ್ರಾಮಸ್ಥರ ಸಭೆ ಆಯೋಜಿಸಿತ್ತಾದರೂ, ಇದೀಗ ನಿಷೇಧಾಜ್ಞೆ ಹಿನ್ನಲೆಯಲ್ಲಿ ಸಭೆ ಮುಂದೂಡುವ ಸಾಧ್ಯತೆ ಕಂಡುಬಂದಿದೆ.