ಹೊಸದಿಗಂತ ವರದಿ ಮಡಿಕೇರಿ:
ಸಾಂಪ್ರದಾಯಿಕ ಉಡುಗೆ ಧರಿಸಿ ಬಂದವರಿಗೆ ತಾಲೂಕಿನ ಕಟ್ಟೆಮಾಡು ಗ್ರಾಮದ ಮೃತ್ಯುಂಜಯ ದೇಗುಲದಲ್ಲಿ ಅಡ್ಡಿಪಡಿಸಲಾಯಿತೆಂಬ ವಿವಾದ ಇದೀಗ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿವಿಧ ಕೊಡವ ಸಂಘಟನೆಗಳು ಕರೆ ನೀಡಿದ್ದ ‘ಕೊಡವರ ನಡೆ ಕಟ್ಟೆಮಾಡು ಕಡೆ’ ಜಾಥಾಕ್ಕೆ ಪೊಲೀಸರು ಪೊನ್ನಂಪೇಟೆಯಲ್ಲಿ ತಡೆ ಒಡ್ಡಿದ್ದಾರೆ. ಈ ಜಾಥಾಕ್ಕೆ ಪ್ರತಿಯಾಗಿ ಗೌಡ ಸಂಘಟನೆಗಳೂ ಜಾಥಾ ಹಮ್ಮಿಕೊಂಡಿದ್ದವಾದರೂ, ಜಿಲ್ಲಾಡಳಿತ ಕಟ್ಟೆಮಾಡು ದೇವಸ್ಥಾನದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಿ ಜಾಥಾ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗೌಡ ಜನಾಂಗದ ಸಂಘಟನೆಗಳು ಜಾಥಾ ಕೈಬಿಟ್ಟವು.
ಆದರೆ ಕೊಡವ ಜನಾಂಗದ ವಿವಿಧ ಸಂಘಟನೆಗಳು ಪೊಲೀಸರ ಮನವಿಗೆ ಸ್ಪಂದಿಸದೆ ಜಾಥಾ ಹೊರಡಲು ಪೊನ್ನಂಪೇಟೆಯಲ್ಲಿ ಸಿದ್ದತೆ ನಡೆಸುತ್ತಿದ್ದಂತೆ ಜಾಥಾ ಸಂಘಟಕರಾದ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದು ಜಾಥಾ ನಡೆಸದಂತೆ ತಡೆಯೊಡ್ಡಿದ್ದಾರೆ.
ಪೊಲೀಸರ ಈ ಕ್ರಮವನ್ನು ವಿರೋಧಿಸಿ ದಕ್ಷಿಣ ಕೊಡಗಿನ ಪೊನ್ನಂಪೇಟೆ, ಹುದಿಕೇರಿ, ಗೋಣಿಕೊಪ್ಪ ಸೇರಿದಂತೆ ಹಲವೆಡೆ ಸ್ವಯಂಪ್ರೇರಿತ ಬಂದ್ ನಡೆಸಲಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಜಾಥಾ ಸಂಘಟಕರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತ ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ ಜೊತೆಗೆ ಬಂದೋಬಸ್ತ್’ಗಾಗಿ 300ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪಡೆ ಹಾಗೂ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಕೆ.ಎಸ್.ಆರ್.ಪಿ. ಪಡೆಗಳನ್ನು ಬಂದೋಬಸ್ತ್’ಗಾಗಿ ನಿಯೋಜಿಸಲಾಗಿದೆ.
ಸೋಮವಾರ ಅಪರಾಹ್ನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಉಭಯ ಜನಾಂಗಗಳ ಪ್ರಮುಖರ ಶಾಂತಿಸಭೆ ನಡೆಸಲಾಗಿದ್ದು, ಉಭಯ ಸಮುದಾಯದವರೂ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಾಗೂ ಪರ ವಿರೋಧ ಸಂದೇಶಗಳನ್ನು ಹರಡುವವರ ವಿರುದ್ದ ಮತ್ತು ಶಾಂತಿಭಂಗ ತರುವವರ ವಿರುದ್ದ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇವೆಲ್ಲದರ ನಡುವೆ ಕೊಡಗು ಬೂದಿ ಮುಚ್ಚಿದ ಕೆಂಡದಂತಿದ್ದು,ಯಾವ ಸಂದರ್ಭದಲ್ಲಿ ಜನಾಂಗೀಯ ಸಂಘರ್ಷದ ಕಿಡಿ ಹತ್ತಿಕೊಳ್ಳುವುದೋ ಎಂಬ ಆತಂಕ ಎದುರಾಗಿದೆ.