ಪಾರಂಪರಿಕವಾಗಿ ಅಚ್ಚಾಗಿ ಉಳಿದ ಹಚ್ಚೆ ಸಂಸ್ಕೃತಿ…!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ಯಾಟೂ ಹಾಕಿಸಿಕೊಳ್ಳುವುದು ಆಧುನಿಕ ಪದ್ಧತಿಯೆನಲ್ಲ. ನಮ್ಮ ಜನಪದ ಕಾಲದಿಂದಲೂ ಪಾರಂಪರಿಕವಾಗಿ ಬೆಳೆದು ಬಂದಿದೆ ಈ ಹಚ್ಚೆ ಸಂಸ್ಕೃತಿ. ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿಶ್ವದಾದ್ಯಂತ ವಿವಿಧ ರೂಪಗಳಲ್ಲಿ ವಿಶಿಷ್ಟ ಸಂಸ್ಕೃತಿಯಾಗಿ ಬೆಳೆದುಬಂದಿದೆ. ಕರ್ನಾಟಕದ ಹಲವು ಹಳ್ಳಿಗಳಲ್ಲಿ, ಗುಡ್ಡಗಾಡಿನ ಪ್ರದೇಶಗಳಲ್ಲಿ ಇನ್ನೂ ಮೂಲ ಸ್ವರೂಪದಲ್ಲೇ ಉಳಿದಕೊಂಡ ಹಚ್ಚೆ ಸಂಸ್ಕೃತಿ, ನಗರ ಹಾಗೂ ಮಹಾನಗರಗಳಲ್ಲಿ ಟ್ಯಾಟೂ ಹೆಸರಿನಲ್ಲಿ ನಾವಿನ್ಯತೆ ಪಡೆದಿದೆ.

ಹಚ್ಚೆ ವಿಶ್ವದಾದ್ಯಂತ ಇದ್ದರೂ, ನಮ್ಮ ನಾಡಿನಲ್ಲಿ ಅದೊಂದು ಜನಪದ ಕಲೆಯಾಗಿ ಅಭಿವೃದ್ಧಿ ಹೊಂದಿದೆ. ಹಚ್ಚೆಗೆ ಹಂಚೆ, ಅಂಚಿ, ಹಣಜಿ, ಅಣಚಿ, ಅಣ್ಣಿ, ಅಚ್ಚಿ ಎಂಬ ವಿವಿಧ ಹೆಸರುಗಳೂ ಸಹ ಉಂಟು. ನಮ್ಮ ಪೂರ್ವಜರು ಗರತಿ (ಮುತ್ತೈದೆ, ಜನಪದ ಗೃಹಿಣಿ) ತನದ ಸೌಭಾಗ್ಯದ ಕುರುಹು ಎಂದು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಸಿಗೆ ತಲುಪಿದ ನಂತರ ಕನ್ಯತ್ವದ ಗುರುತಿಗಾಗಿ ಹಚ್ಚೆ ಹಾಕುತ್ತಿದ್ದರು. ಜನಪದ ಗೀತೆಯೊಂದರ ಪ್ರಕಾರ ಬದುಕಿದ್ದಾಗ ಹಾಗೂ ಮರಣದ ನಂತರ ತಮ್ಮೊಡನೆ ಶಾಶ್ವತವಾಗಿ ಉಳಿಯುವುದು ಹಚ್ಚೆ ಗುರುತು ಒಂದೇ ಎಂದು ಜನಪದರ ನಂಬಿಕೆಯಾಗಿತ್ತು.

“ಸತ್ತಾರ ನಮಕೂಡ ಮತ್ತೇನು ಬರಬಹುದು?
ಹಚ್ಚಿಯ ಬೊಟ್ಟು ಸುಲಿಹಲ್ಲು ಕಟ್ಟಿರೋ ತುರುಬು!”

ಕರ್ನಾಟಕದಲ್ಲಿ ಹಚ್ಚೆ ಸಂಸ್ಕೃತಿ 12ನೇ ಶತಮಾನದ ಪೂರ್ವದಲ್ಲೇ ಇತ್ತೆಂಬುದಕ್ಕೆ ಸೂಕ್ತಿ ಸುಧಾರ್ಣವ ಗ್ರಂಥವೇ ಆಧಾರ. ಗ್ರಾಮೀಣ ಭಾಗದಲ್ಲಿ ಇದಕ್ಕೆ ಹೆಚ್ಚು ಪ್ರಚಾರವಿತ್ತು. ಹಚ್ಚೆಯ ಚಿತ್ತಾರಗಳಲ್ಲಿ ವೈವಿಧ್ಯಮಯವಾದ ವಿನ್ಯಾಸಗಳುಂಟು. ತಾವರಿ, ತೇರು, ಶಂಖ, ಬಾಸಿಂಗ, ಶಿವನ ಬಾಸಿಂಗ, ರಾಮನ ತೊಟ್ಟಿಲು, ಹೂವು, ಅಲ್ಲದೇ ಪಕ್ಷಿ-ಪ್ರಾಣಿಗಳು, ಬಳ್ಳಿಯ ಸುಳಿಗಳು, ಜೋಗಿ ಜಡೆ ಮುಂತಾದ ಹಚ್ಚೆಯ ಶೈಲಿಗಳಿವೆ.

ಹಚ್ಚೆ ಹಾಕುವ ವಿಧಾನ

4-6 ಸೂಜಿಗಳನ್ನು ಕಟ್ಟಿಕೊಂಡು, ಹಾಕಬೇಕಾದ ಹಚ್ಚೆಯ ಶೈಲಿ ಗುರುತು ಮಾಡಿಕೊಂಡು, ಚುಚ್ಚಿ ಅದಕ್ಕೆ ಬೇಕಾಗುವ ವನಸ್ಪತಿಯ ರಸವನ್ನು ತುಂಬುತ್ತಾರೆ. ಚುಚ್ಚುವಾಗ ಆಗುವ ನೋವನ್ನು ಮರೆಸಲು ಹಚ್ಚೆ ಹಾಕುವವರು ಜನಪದ ಹಾಡುಗಳು ಹಾಡುತ್ತಿದ್ದರು. ಹಚ್ಚೆಯನ್ನು ಮುಂಗೈಯಿಂದ ಮೊಣಕಾಲವರೆಗೂ, ಹಣೆ, ಗಲ್ಲ, ಗದ್ದಗಳ ಮೇಲೆ ಹಾಕಿಸುವ ಪದ್ಧತಿ ಇದೆ.

ಹಚ್ಚೆ ಹಾಕುವ ಸಮುದಾಯ

ಕರ್ನಾಟಕದಲ್ಲಿ ಕಿಳ್ಳಿಕ್ಯಾತರು, ಕೊರವರು, ಜೋಗೇರು, ಮೇದಾರರು, ಒಡ್ಡರು, ಮಾದರು, ಗೊಂದಲಿಗರು ಈ ಹಚ್ಚೆ ಹಾಕುವ ಕಾಯಕದಲ್ಲಿ ತೊಡಗಿದ್ದರು ಎಂದು ಜನಪದ ತಜ್ಞರು ತಿಳಿಸಿದ್ದಾರೆ. ಹಚ್ಚೆ ಹಾಕಿಸಿಕೊಂಡವರು ಹಚ್ಚೆ ಹಾಕಿದವರಿಗೆ ಇಂತಿಷ್ಟು ಧಾನ್ಯ, ದವಸ-ದಕ್ಷಿಣೆ ಕೊಡುವ ಪ್ರತೀತಿ ಇತ್ತು.

ಶೋಕಿಯ ಭಾಗವಾದ ಆಧುನಿಕ ಟ್ಯಾಟೂ ಪದ್ಧತಿ ಹಿಂದೆ ಹಚ್ಚೆಯ ವಿಶಿಷ್ಟ ಪರಂಪರೆ, ಇತಿಹಾಸ ಇರುವುದು ನಮ್ಮ ಸಂಸ್ಕೃತಿಯ ವೈವಿಧ್ಯತೆಯ ಪ್ರತೀಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!