ಹೊಸದಿಗಂತ ಡಿಜಿಟಲ್ ಡೆಸ್ಕ್:
15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ ಇಂದಿನಿಂದ ಶುರುವಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು, ಮೊದಲ ದಿನವೇ ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಏರ್ ಶೋ ನಡೆಯುವ ಸ್ಥಳದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೆಳ್ಳಂಬೆಳಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ. ಕಿಲೋಮೀಟರ್‌ಗಟ್ಟಲೇ ವಾಹನಗಳು ನಿಂತ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಏರ್ ಶೋ ಉದ್ಘಾಟನಾ ಕಾರ್ಯಕ್ರಮದ ಸ್ಟಾಲ್‌ಗಳಿಗೆ ಬರುವ ಗಣ್ಯರಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಕಳೆದ ಎರಡು ಗಂಟೆಯಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ.
ಇನ್ನೂ ಇಂದಿನಿಂದ ಏರ್ ಶೋ ಆರಂಭ ಹಿನ್ನೆಲೆ 5 ದಿನಗಳ ಕಾಲ ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಆಗಮಿಸುವ ಕಾರಣ ಎಲಿವೇಟೆಡ್ ರಸ್ತೆಯ ಓಡಾಟವನ್ನ ಕೆಲ ಕಾಲ ಬಂದ್ ಮಾಡಲಾಗುತ್ತೆ. ಸರ್ವೀಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಿರೋ ಕಾರಣ ಆ ಭಾಗದ ವಾಹನ ಸವಾರರು 5 ದಿನಗಳ ಕಾಲ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ, ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ.