ಹೊಸದಿಗಂತ ವರದಿ ಕುಮಟಾ:
ಸ್ನೇಹಿತರೊಂದಿಗೆ ಸಮುದ್ರ ತೀರದಲ್ಲಿ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದ ವೇಳೆ ಪ್ರವಾಸಿಗನೊಬ್ಬ ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪೂಣೆ ಮೂಲದ ಜೀವನ ಭಟರಾಯಿ (26) ಸಮುದ್ರದಲ್ಲಿ ಕೊಚ್ಚಿಹೋದ ಯುವಕನಾಗಿದ್ದಾನೆ. ರಜೆ ಕಳೆಯುವ ಉದ್ದೇಶದಿಂದ ಸ್ನೇಹಿತರೊಂದಿಗೆ ಕುಮಟಾಕ್ಕೆ ಆಗಮಿಸಿದ್ದ ಆತ, ಕಳೆದ ಮೂರು ದಿನಗಳಿಂದ ಕಡ್ಲೆಯ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದನು.
ಸೋಮವಾರ ಸಮುದ್ರ ತೀರದಲ್ಲಿ ಸ್ನೇಹಿತರೊಂದಿಗೆ ನೀರಿಗಿಳಿದು ಮೊಬೈಲ್ ಮೂಲಕ ರೀಲ್ಸ್ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಏಕಾಏಕಿ ಅಲೆಗಳ ಅಬ್ಬರ ಹೆಚ್ಚಾಗಿ, ಜೀವನ ಭಟರಾಯಿ ಸಮುದ್ರದ ಸೆಳೆತಕ್ಕೆ ಸಿಲುಕಿದ್ದಾನೆ. ಕ್ಷಣಾರ್ಧದಲ್ಲಿ ಆತ ಕೊಚ್ಚಿಕೊಂಡು ಹೋಗಿದ್ದು, ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಶೋಧ ಕಾರ್ಯ ಮುಂದುವರಿಕೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕರಾವಳಿ ಕಾವಲು ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.
ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



