ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಪವಿತ್ರ ಸ್ನಾನದ ವೇಳೆ ದುರಂತ ಸಂಭವಿಸಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದಲ್ಲಿ ನಡೆದ ‘ಜೀವಿತ್ ಪುತ್ರಿಕ’ ಹಬ್ಬದ ಸಂದರ್ಭ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ ಒಟ್ಟು 46 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಬಿಹಾರ ರಾಜ್ಯ ಸರ್ಕಾರ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿತಿಯಾ ಪರ್ವ್ ಮೂರು ದಿನಗಳ ಹಬ್ಬವಾಗಿದ್ದು ಈ ‘ಜೀವಿತ್ ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ಬಳಿಕ ನದಿ, ಕೊಳ, ಅಥವಾ ಇತರೆ ಜಲಮೂಲಗಳಲ್ಲಿ ಸಾಮೂಹಿಕ ಪವಿತ್ರ ಸ್ನಾನ ಮಾಡುತ್ತಾರೆ.
ಈ ಪವಿತ್ರ ಸ್ನಾನದ ವೇಳೆ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಬಿಹಾರದ ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ನಳಂದಾ, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ರಾಜಧಾನಿ ಪಾಟ್ನಾ, ವೈಶಾಲಿ, ಮುಜಾಫರ್‌ಪುರ, ಸಮಸ್ತಿಪುರ್, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಸಾವುಗಳು ವರದಿಯಾಗಿವೆ.
ಇನ್ನು ಈ ಪವಿತ್ರ ಸ್ನಾನ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಬಿಹಾರ ಸರ್ಕಾರ ತಲಾ 4 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.
ಇನ್ನು ಕಳೆದ ಅಕ್ಟೋಬರ್‌ನಲ್ಲಿ ಇದೇ ಹಬ್ಬದ ಸಂದರ್ಭದಲ್ಲಿ ಬಿಹಾರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕೇವಲ 24 ಗಂಟೆಗಳ ಅಂತರದಲ್ಲಿ 15 ಮಕ್ಕಳು ಸೇರಿದಂತೆ 22 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.