ಹೊಸದಿಗಂತ ವರದಿ, ಮಂಡ್ಯ :
ಕೆಆರ್‌ಎಸ್ ಸುತ್ತ ನಡೆಸಲುದ್ದೇಶಿಸಿದ್ದ ಟ್ರಯಲ್ ಬ್ಲಾಸ್ಟ್ ವಿಚಾರಣೆಯನ್ನು ಹೈಕೋರ್ಟ್ ಜು.30ಕ್ಕೆ ಮುಂದೂಡಿದೆ. ಇದರಿಂದ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ ಕೈಗೊಂಡಿದ್ದ ನೀರಾವರಿ ಮತ್ತು ಗಣಿ ಇಲಾಖೆಗೆ ಹಿನ್ನಡೆಯುಂಟಾಗಿದೆ.
ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಆರಂಭದಲ್ಲಿ ಉತ್ಸಾಹ ತೋರಿದ್ದ ರಾಜ್ಯಸರ್ಕಾರ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂದೆ ಸರಿದಂತೆ ಕಂಡುಬರುತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲೂ ಟ್ರಯಲ್ ಬ್ಲಾಸ್ಟ್ ಅವಕಾಶ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ತಾಂತ್ರಿಕ ತಜ್ಞರು, ಅಡ್ವೋಕೇಟ್ ಜನರಲ್, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಅನುಮತಿ ನೀಡದಂತೆ ವಾಸ್ತವಾಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು. ಅಣೆಕಟ್ಟು ಸುರಕ್ಷತಾ ಸಮಿತಿಯಿಂದಲೂ ವರದಿಯನ್ನು ಪಡೆದುಕೊಂಡು ಟ್ರಯಲ್‌ಬ್ಲಾಸ್ಟ್‌ಗೆ ಅನುಮತಿ ನೀಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅಣೆಕಟ್ಟೆಗೆ ಎದುರಾಗುವ ಅಪಾಯಗಳ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಡಿಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.