ಹೊಸದಿಗಂತ ಶಿರಸಿ:
ದಾಂಡೇಲಿ ಭಾಗದ ಜನರ ದಶಕಗಳ ಕನಸು ಹಾಗೂ ಬಹುದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಕೊರೊನಾ ಕಾಲದ ಸಂಕಷ್ಟದಿಂದಾಗಿ ಸ್ಥಗಿತಗೊಂಡಿದ್ದ ದಾಂಡೇಲಿ ರೈಲು ಸೇವೆ ಈಗ ಮತ್ತೆ ಆರಂಭಗೊಳ್ಳುತ್ತಿದ್ದು, ಈ ಭಾಗದ ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ಬಂದಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಸಿದ ನಿರಂತರ ಒತ್ತಡ ಮತ್ತು ಶ್ರಮದ ಫಲವಾಗಿ ಈ ರೈಲು ಪುನರಾರಂಭಗೊಳ್ಳುತ್ತಿದೆ. ಫೆಬ್ರವರಿ 7ರ ಶನಿವಾರ ಸಂಜೆ 4 ಗಂಟೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಧಿಕೃತವಾಗಿ ಹಸಿರು ನಿಶಾನೆ ತೋರುವ ಮೂಲಕ ಈ ಸೇವೆಗೆ ಚಾಲನೆ ನೀಡಲಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಬಳಿಕ ಸ್ಥಗಿತಗೊಂಡಿದ್ದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರು. ದಾಂಡೇಲಿಗೆ ಬರುವ ಪ್ರವಾಸಿಗರಿಗೆ ಇದು ದೊಡ್ಡ ವರದಾನವಾಗಲಿದೆ. ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ದೈನಂದಿನ ಪ್ರಯಾಣಿಕರಿಗೆ ಈ ರೈಲು ಆರ್ಥಿಕವಾಗಿ ಸಹಕಾರಿಯಾಗಲಿದೆ.



