ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತವಾಗುತ್ತಿದ್ದು,ದೇಶವ್ಯಾಪಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಇತ್ತ ಮುಷ್ಕರದ ಜೊತೆಗೆ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಹೆಚ್ಚಿನ ಆಗ್ರಹ ಕೇಳಿ ಬರುತ್ತಿದೆ .
ಇದೀಗ 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಶಾ ದೇವಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಕಿಡಿಕಾರಿದ್ದಾರೆ.
ತ್ತರಪ್ರದೇಶದ ಬಲಿಯಾದಲ್ಲಿ ಈ ಕುರಿತು ಮಾತನಾಡಿದ ಆಶಾ ದೇವಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಬ್ಬ ಮಹಿಳೆಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಪರಿಸ್ಥಿತಿ ನಿಭಾಯಿಸಲು ವಿಫಲರಾದ ಕಾರಣ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದು ನಿರ್ಭಯಾ ಅವರ ತಾಯಿ ಆಶಾ ದೇವಿ ಆಗ್ರಹಿಸಿದ್ದಾರೆ.