ಹೊಸದಿಗಂತ ವರದಿ, ವಿಜಯಪುರ:
ಶ್ರೀಗಂಧ ಕಟ್ಟಿಗೆಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ನಿವಾಸಿ ರವಿ ದೇವಜಿ ರಾಠೋಡ ಶಿಕ್ಷೆಗೊಳಗಾದ ಆರೋಪಿ.
ನ. 20, 2019 ರಂದು ಇಂಡಿ ತಾಲೂಕಿನ ಮಿರಗಿ ಗ್ರಾಮದ ಜಮದಗ್ನಿ ಭೀಮರಾಯ ಹಳ್ಳಿ ಎಂಬುವರ ಜಮೀನಿನ ದಂಡೆ ಮೇಲಿದ್ದ ಶ್ರೀಗಂಧದ ಗಿಡ ಕಡಿದು, ತುಂಡಾಗಿ ಮಾಡಿದ ಕಟ್ಟಿಗೆಗಳನ್ನು ಮೋಟರ್ ಸೈಕಲ್ ಮೇಲೆ ತೆಗೆದುಕೊಂಡು ಹೋಗುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದರು.
ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಾಡೆ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.