ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇತನ ಹಿಂಬಾಕಿ ಮತ್ತು ಪರಿಷ್ಕರಣೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಗುರುವಾರ (ಜ.29) ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ.
ಗುರುವಾರ ಸಂಜೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಸಂಜೆ 4 ಗಂಟೆ ವೇಳೆಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರದೇ ಇದ್ದ ಪಕ್ಷದಲ್ಲಿ ದೊಡ್ಡ ಹೋರಾಟಕ್ಕೆ ಜಂಟಿ ಕ್ರಿಯಾ ಸಮಿತಿ ಪ್ಲ್ಯಾನ್ ಮಾಡಿದೆ. ಸಾರಿಗೆ ನೌಕರರು ಸಾಮೂಹಿಕ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ.
2020ರ ಜನವರಿ 1ರಿಂದ -2023ರ ಫೆಬ್ರವರಿ 28ರವರೆಗಿನ ವೇತನ ಪರಿಷ್ಕರಣೆ ಹಿಂಬಾಕಿ, 2024ರ ಜನವರಿ 1ರಿಂದ 4 ವರ್ಷಗಳ ವೇತನ ಒಪ್ಪಂದಕ್ಕೆ ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಆದರೆ, ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಮಾತ್ರ ಸಾರಿಗೆ ನೌಕರರು ಯಾವುದೇ ಮುಷ್ಕರ ಮಾಡುವಂತಿಲ್ಲ, ಮುಷ್ಕರಕ್ಕೆ ಬೆಂಬಲ ನೀಡುವಂತಿಲ್ಲ. ನಾಳೆ ಕೆಲಸಕ್ಕೆ ಬಾರದೇ ಇದ್ದಲ್ಲಿ ವೇತನ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ಮಧ್ಯೆ, ಸಾರಿಗೆ ಸಂಘಟನೆಗಳ ಮತ್ತೊಂದು ಸಂಘಟನೆಯಾದ ಕೆಎಸ್‌ಆರ್‌ಟಿಸಿ ನೌಕರರ ಕೂಟವೂ ಸಹ ಪ್ರತಿಭಟನೆಗೆ ಮುಂದಾಗಿದ್ದು, ಶಿವರಾತ್ರಿ ನಂತರ ಫೆಬ್ರವರಿ 15ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡ್ತೇವೆ ಅಂದಿದ್ದಾರೆ.



