ಪ್ರಯಾಣಿಕರೇ ಗಮನಿಸಿ.. ಶನಿವಾರ, ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಶನಿವಾರ ಹಾಗೂ ಭಾನುವಾರ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗಿದೆ. ಸಂಚಾರ ಪೊಲೀಸ್ ಪೂರ್ವ ವಿಭಾಗದ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಏಪ್ರಿಲ್ 19 ಮತ್ತು 20ರಂದು ಸಂಚಾರ ನಿರ್ಬಂಧ ವಿಧಿಸಲಾಗಿದೆ.

ವಿವೇಕಾನಂದ ರಸ್ತೆ ಸೋಮೇಶ್ವರ ದೇವಸ್ಥಾನದ ಉತ್ಸವದ ಪ್ರಯುಕ್ತ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಚಾರವಾಗಿ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಸೋಮೆಶ್ವರ ದೇವಸ್ಥಾನದ ವತಿಯಿಂದ ಸೋಮೆಶ್ವರ ದೇವರ ರಥೋತ್ಸವ ಮತ್ತು ದೇವರ ಪಲ್ಲಕ್ಕಿಗಳ ಉತ್ಸವದ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್‌ನಿಂದ ರಾಮಯ್ಯ ಜಂಕ್ಷನ್‌ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ). ತಾಮರೈ ಕಣ್ಣನ್ ಜಂಕ್ಷನ್ ಬಳಿ ಬಲತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿರುತ್ತದೆ. ಬೇಗಂ ಮಹಲ್ ಜಂಕ್ಷನ್‌ ನಿಂದ ರಾಮಯ್ಯ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಸಾಗರ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆಯಿಂದ ಟ್ರಿನಿಟಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಆಂಜನೇಯ ಜಂಕ್ಷನ್ ಬಳಿ ನೇರವಾಗಿ ಸಾಗಿ ಶೆನ್ಸಿಂಗ್‌ಟನ್ ರಸ್ತೆಯ ಮೂಲಕ ಗುರುದ್ಧಾರ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಗಂಗಾಧರಚೆಟ್ಟಿ ರಸ್ತೆ ಮೂಲಕ ಮುಂದೆ ಸಂಚರಿಸುವುದು. ಟ್ರಿನಿಟಿ ಜಂಕ್ಷನ್‌ನಿಂದ ಆಂಜನೇಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಕಾಮದೇ ಬಳಿ ಎಡ ತಿರುವು ಪಡೆದು ಗುರುದ್ವಾರ ಜಂಕ್ಷನ್ ತಲುಪಿ ಹಳೆ ಮದ್ರಾಸ್ ರಸ್ತೆಯ ಮೂಲಕ ಮುಂದೆ ಸಂಚರಿಸುವುದು. ತಾಮರೈ ಕಣ್ಣನ್ ಜಂಕ್ಷನ್ ಬಳಿ ಬಲ ತಿರುವು ನಿರ್ಬಂಧಿಸಿರುವ ಕಾರಣ ವಾಹನ ಸವಾರರು ತಾಮರೈ ಕಣ್ಣನ್ ಜಂಕ್ಷನ್‌ನಿಂದ ನೇರವಾಗಿ ಚಲಿಸಿ ಹಳೆ ಮದ್ರಾಸ್ ರಸ್ತೆಯ ಡಬಲ್ ರಸ್ತೆ ಬಳಿ ಬಲ ತಿರುವು ಪಡೆದು ಮುಂದೆ ಸಂಚರಿಸುವುದು. ಬೇಗಂ ಮಹಲ್ ಜಂಕ್ಷನ್‌ನಿಂದ ರಾಮಯ್ಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಬೇಗಂ ಮಹಲ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುರುದ್ವಾರ ಜಂಕ್ಷನ್ ತಲುಪಿ ಹಳೆ ಮದ್ರಾಸ್ ರಸ್ತೆಯ ಮೂಲಕ ಮುಂದೆ ಸಂಚರಿಸುವುದು. ಶಾಂತಿಸಾಗರ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಶಾಂತಿಸಾಗರ ಜಂಕ್ಷನ್ ಬಳಿ ಬಲ ತಿರುವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಮುಂದೆ ಸಂಚರಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!