ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೋಟಕ್ಕಲ್ ಆರ್ಯುವೇದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಂಡಿನೋವಿನ ಚಿಕಿತ್ಸೆ ಶನಿವಾರ ಮುಕ್ತಾಯವಾಗಿದ್ದು, ಅವರು ದೆಹಲಿಗೆ ವಾಪಾಸ್ ಆಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಡಿನೋವಿನ ಸಮಸ್ಯೆಗೆ ಒಳಗಾಗಿದ್ದು, ಕೇರಳದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಜುಲೈ 30ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದರು. ಆದರೆ, ಒಂದು ದಿನ ಮೊದಲೇ ಅವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ‘ಕೋಟಕ್ಕಲ್ ಆರ್ಯ ವೈದ್ಯ ಶಾಲೆಯಲ್ಲಿ ತಂಗಿದ್ದು ನನಗೆ ಹೊಸ ಚೈತನ್ಯದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಹಂಚಿಕೊಂಡ ಪ್ರೀತಿ ಮತ್ತು ಕಾಳಜಿಗಾಗಿ ಡಾ. ಪಿ.ಎಂ.ವಾರಿಯರ್ ಮತ್ತು ಇತರ ವೈದ್ಯ ಹಾಗೂ ಸಿಬ್ಬಂದಿಗಳಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.
ರಾಹುಲ್ ಅವರಿಗಾಗಿ ಆಸ್ಪತ್ರೆಯಲ್ಲಿ ಪಿಎಸ್‌ವಿ ನಾಟ್ಯ ಸಂಘದಿಂದ ಕಥಕ್ಕಳಿ ಆಧಾರದ ದಕ್ಷಯಜ್ಞ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ವೇಳೆ ಅವರು ಮಲಯಾಳಂ ಕವಿ ವಾಸುದೇವನ್ ನಾಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತ್ ಜೋಡೋ ಯಾತ್ರೆಯ ಬಳಿಕ ರಾಹುಲ್ ಮಂಡಿನೋವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.