ಹೊಸದಿಗಂತ ವರದಿ, ಮಂಡ್ಯ :
ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ರೈಲಿನ ಮುಂಭಾಗಕ್ಕೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಗಾಜು ಒಡೆದು ರೈಲಿನ ಚಾಲಕ (ಲೋಕೋ ಪೈಲೆಟ್) ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ಸೋಮವಾರ ಸಂಜೆ ಜರುಗಿದೆ.
ರೈಲು ಚಾಲಕ ಪ್ರಸಾದ್ (39) ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಮೇಲೆ ತೆರಳಿದ್ದಾರೆ. ಬೇರೆ ಲೋಕೋ ಪೈಲೆಟ್ ಬಂದು ರೈಲನ್ನು ಮುನ್ನಡೆಸಬೇಕಿರುವುದರಿಂದ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ರೈಲು ಮಂಡ್ಯ ನಿಲ್ದಾಣದಲ್ಲಿ ನಿಂತಿತ್ತು. ರೈಲಿನಲ್ಲಿದ್ದ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ ಬೇರೆ ರೈಲುಗಳ ಮೂಲಕ ಪ್ರಯಾಣವನ್ನು ಮುಂದುವರಿಸಿದರು.
ಬೆಂಗಳೂರಿನಿಂದ ಮೈಸೂರು ಕಡೆಗೆ ಸೋಮವಾರ ಸಂಜೆ 6:20ರ ಸಮಯದಲ್ಲಿ ಮೆಮೊರೈಲು, ಸಂಚರಿಸುತ್ತಿತ್ತು. ರೈಲು ಮಂಡ್ಯ ಸಕ್ಕರೆ ವೃತ್ತದ ಮಾರ್ಗವಾಗಿ ಸಂಚರಿಸುವ ವೇಳೆ ಗಾಳಿ ಸಹಿತ ಜೋರು ಮಳೆಯಾಗುತ್ತಿದ್ದರಿಂದ ಮರದ ಕೊಂಬೆಯೊಂದು ಮುರಿದು ರೈಲಿನ ಮುಂಭಾಗಕ್ಕೆ ಬಡಿದಿದೆ. ಪರಣಾಮ ಮುಂಭಾಗದ ಗಾಜು ಜಖಂಗೊಂಡು ಕ್ಯಾಬಿನ್ ಒಳಗಿದ್ದ ಚಾಲಕ ಪ್ರಸಾದ್ ಗಾಯಗೊಂಡರು. ಇದರ ನಡುವೆಯೂ ಚಾಲಕ ಸುರಕ್ಷಿತವಾಗಿ ರೈಲನ್ನು ನಿಲ್ದಾಣಕ್ಕೆ ತಂದು ನಿಲ್ಲಿಸಿದರು.