ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನಾಂಗೀಯ ಘರ್ಷಣೆಗಳ ಮಧ್ಯೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಗುರುವಾರ ಮಣಿಪುರದ ಚುರಾಚಂದ್‌ಪುರದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಒಂದು ದಿನದ ಹಿಂದೆ ಕಾಣಿಸಿಕೊಂಡ ಎರಡು ತಿಂಗಳ ಹಳೆಯ ಘಟನೆಯ ವಿಡಿಯೊದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯಕ್ಕಾಗಿ ಜನರು ಒತ್ತಾಯಿಸಿದ್ದಾರೆ.
ತೌಬಲ್ ಜಿಲ್ಲೆಯಿಂದ ಸೆರೆಹಿಡಿಯಲಾದ 26 ಸೆಕೆಂಡುಗಳ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಶಂಕಿತರಲ್ಲಿ ಒಬ್ಬನನ್ನು ಬಂಧಿಸಿರುವುದಾಗಿ ಮಣಿಪುರ ಪೊಲೀಸರು ಗುರುವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಈ ಘೋರ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಮರಣದಂಡನೆಯ ಸಾಧ್ಯತೆ ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಘಟನೆಯ ತನಿಖೆ ಮತ್ತು ತ್ವರಿತ ನ್ಯಾಯ ಖಚಿತಪಡಿಸಿಕೊಳ್ಳಲು ಹಲವಾರು ಪೊಲೀಸ್ ಘಟಕಗಳನ್ನು ತ್ವರಿತವಾಗಿ ರಚಿಸಲಾಯಿತು.
ತೀವ್ರವಾದ ಅವಮಾನ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯ ನೋಯುತ್ತಿದೆ ಎಂದು ಸಿಂಗ್ ಗುರುವಾರ ಟ್ವೀಟ್ ಮಾಡಿದ್ದಾರೆ. ಸಂಪೂರ್ಣ ತನಿಖೆ ನಡೆಯುತ್ತಿದೆ ಮತ್ತು ಸಂತ್ರಸ್ತರಿಗೆ ನ್ಯಾಯ ನೀಡುವುದಕ್ಕಾಗಿ ತಪ್ಪಿತಸ್ಥರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.