ಹೊಸದಿಗಂತ ವರದಿ ಬಳ್ಳಾರಿ:
ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 800 ಮೀಟರ್ ಓಟದಲ್ಲಿ ‘ಕಂಚಿನ ಪದಕ’ ಪಡೆದ ನಂದಿನಿ ಅಗಸರ್ ಅವರಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ನಿವಾಸಿಯಾಗಿದ್ದು, ಸದ್ಯ ನೆರೆಯ ಆಂದ್ರದಲ್ಲಿ ವಾಸವಾಗಿದ್ದಾರೆ. ಪದಕ ಪಡೆದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ನಂದಿನಿ ಅಗಸರ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಗರ ಶಾಸಕ ನಾರಾ ಭರತ್ ರೆಡ್ಡಿ, ಎಮ್ಮೆಲ್ಸಿ ವೈ.ಎಂ.ಸತೀಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಗಣ್ಯರು ನಂದಿನಿ ಅಗಸರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಜೊತೆಗೆ ಅವರ ತಂದೆ ಉಪಸ್ಥಿತರಿದ್ದು, ಮಗಳ ಸಾಧನೆಗೆ ದೊರೆಯುವ ಗೌರವ, ಪ್ರೋತ್ಸಾಹ ಕಂಡು ಅತ್ಯಂತ ಸಂತಸಪಟ್ಟರು. ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ನಂದಿನಿ ಅಗಸರ್ ಅವರ ಸಾಧನೆ ಅತ್ಯಂತ ಸಂತಸ, ಹೆಮ್ಮೆ ತಂದಿದೆ.
ಕಡು ಬಡತನದ ಮಧ್ಯೆ ನಂದಿನಿ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರ ಪಾಲಕರ ಪ್ರೋತ್ಸಾಹ, ಪ್ರೀತಿ, ಬೆಂಬಲ, ನಂದಿನಿ ಅವರಿಗೆ ತರಬೇತಿ ನೀಡಿದ ಕೋಚ್ ಅವರ ಶ್ರಮಕ್ಕೆ ತಕ್ಕ ಪ್ರತಿಪಲ ದೊರೆತಿದೆ. ನಂದಿನಿ ಅಗಸರ್ ಅವರ ಸಾಧನೆ ದೇಶದ ಕೀರ್ತಿ ಹೆಚ್ಚಿಸಿದೆ. ನಮ್ಮ ಟಚ್ ಪಾರ್ ಲೈಫ್ ಫೌಂಡೇಶನ್ ವತಿಯಿಂದ 3 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಕಂಚಿನ ಪದಕ ಪಡೆದ ನಂದಿನಿ ಅಗಸರ್ ಮಾತನಾಡಿ, ಯಾವುದೇ ಕೆಲಸ ಇರಲಿ ಶ್ರದ್ಧೆಯಿಂದ ಮಾಡಿದರೇ ಖಂಡಿತ ಫಲ, ಯಶಸ್ಸು ಸಿಗಲಿದೆ, ಇದಕ್ಕೆ ನಾನೇ ಉದಾಹರಣೆ. ಏಷ್ಯನ್ ಗೇಮ್ಸ್ ನಲ್ಲಿ ಪದಕ ಪಡೆದಿರುವುದು ಅತ್ಯಂತ ಸಂತಸ ಮೂಡಿಸಿದೆ.
ಓಲಂಪಿಕ್ ಗೇಮ್ಸ್ ನಲ್ಲೂ ಭಾಗವಹಿಸಿ ಪದಕ ಪಡೆಯಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿರುವೆ, ಅದನ್ನು ಪಡೆಯುವ ವಿಶ್ವಾಸವಿದೆ. ನನಗೆ ಪ್ರೋತ್ಸಾಹ ನೀಡಿದ ನನ್ನ ಪಾಲಕರಿಗೆ ಹಾಗೂ ನನಗೆ ತರಬೇತಿ ನೀಡಿದ ರಮೇಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.