ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಶಿವರಾತ್ರಿಯ ದಿನ ಅಂಬಾವಿಲಾಸ್ ಅರಮನೆಯ ಮುಂಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ತ್ರಿನೇಶ್ವರ ಸ್ವಾಮಿಗೆ 11 ಕೆ.ಜಿ. ತೂಕದ ಚಿನ್ನದ ಮುಖವಾಡ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಇದು ವರ್ಷಕ್ಕೆ ಒಂದು ಬಾರಿ ಮಾತ್ರ ಶಿವರಾತ್ರಿಯ ದಿನ ಹಾಕಲಾಗುತ್ತದೆ.
ವಿಶ್ವವಿಖ್ಯಾತ ಅಂಬಾವಿಲಾಸ್ ಅರಮನೆಯ ಮುಂಭಾಗದ ಪೂರ್ವ ದಿಕ್ಕಿನಲ್ಲಿ ಅಂದರೆ ಜಯಮಾರ್ತಾಂಡ ದ್ವಾರದ ಬಲ ಭಾಗದಲ್ಲಿ ತ್ರಿನೇಶ್ವರ ಸ್ವಾಮಿಯ ದೇವಾಲಯವಿದೆ. ತ್ರಿನೇಶ್ವರ ಎಂದರೆ ಮೂರು ಕಣ್ಣಿನ ಶಿವ ಎಂದರ್ಥ. ರಣಧೀರ ಕಂಠೀರವ ನರಸರಾಜ ಒಡೆಯರ್ ಹಾಗೂ ಒಂದನೇ ದೇವರಾಜ್ ಒಡೆಯರ್ ಈ ದೇವಾಲಯವನ್ನು ನಿರ್ಮಿಸಿದ್ದಾರೆ.
ಮಹಾಶಿವರಾತ್ರಿ ದಿನ ಮಾತ್ರ ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಾಕಿ ಪೂಜೆ ಸಲ್ಲಿಸುವುದು ವಿಶೇಷ. ಶಿವನ ಮುಖವಾಡ ಜಿಲ್ಲಾ ಖಜಾನೆಯಲ್ಲಿ ಇರಲಿದ್ದು, ಶಿವರಾತ್ರಿಯ ಹಿಂದಿನ ದಿನ ಬಿಗಿ ಭದ್ರತೆಯಲ್ಲಿ ತರಲಾಗುತ್ತದೆ. ತ್ರಿನೇಶ್ವರ ಸ್ವಾಮಿಗೆ ಧರಿಸಿ ಪೂಜೆ ಸಲ್ಲಿಸಿ ಮತ್ತೆ ಶಿವರಾತ್ರಿ ಮುಗಿದ ನಂತರ ತೆಗೆದುಕೊಂಡು ಹೋಗಿ ಖಜಾನೆಯಲ್ಲಿ ಇಡಲಾಗುವುದು.