ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಸಿಕ್ಕಿಬಿದ್ದ ಬೆನ್ನಲ್ಲೇ ಅನೇಕ ರೋಚಕ ವಿಚಾರಗಳು ಬಯಲಾಗುತ್ತಿದ್ದು, ಈ ನಟಿಯ ಕೇವಲ ಒಂದೆರಡು ಬಾರಿ ದುಬೈಗೆ ಹೋಗಿಲ್ಲ. ಈಕೆ ಬರೋಬ್ಬರಿ 40 ಬಾರಿ ದುಬೈಗೆ ಹೋಗಿ ಬಂದಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ರನ್ಯಾ ಬಂಧನಕ್ಕೂ 2 ವಾರಗಳ ಹಿಂದೆ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನು ಡಿಜಿಪಿ ಮಗಳು ಎಂದು ತಪಾಸಣೆಗೆ ಒಳಗಾಗದೇ ಹೊರಗೆ ಬರುತ್ತಿದ್ದದ್ದಳು. ಪ್ರತಿ ಬಾರಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಹೋಗುತ್ತಿದ್ದರು.
ಹೀಗಾಗಿ ರನ್ಯಾಳ ಮೇಲೆ ಕಣ್ಣಿಟ್ಟಿದ್ದ ಡಿಆರ್ಐ ಅಧಿಕಾರಿಗಳು ಆಕೆಯ ವಿದೇಶ ಪ್ರಯಾಣದ ಹಿನ್ನೆಲೆಯನ್ನು ಕೆದಕುತ್ತಾ ಹೋದಾಗ ಒಂದೊಂದಾಗಿಯೇ ಎಲ್ಲವೂ ಬಯಲಾಗಿದೆ.
ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದಳು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗುತ್ತಿದ್ದ ರನ್ಯಾಳಿಗೆ ಯಾವುದೇ ಹೂಡಿಕೆ, ರಕ್ತ ಸಂಬಂಧಿಕರು ಇಲ್ಲ ಎಂಬ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಡಿಆರ್ಐ ಅಧಿಕಾರಿಗಳು ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ರನ್ಯಾ ಮತ್ತೆ ದುಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಜಾಗೃತರಾದ ಅಧಿಕಾರಿಗಳು ರನ್ಯಾ ಬರುವಿಕೆಗಾಗಿಯೇ ಕಾಯುತ್ತಿದ್ದರು. ಮಾ. 3 ರಂದು ರನ್ಯಾ ಪತಿ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಣಕ್ಕೆ ಬಂದಿಳಿಯುತ್ತಿದ್ದಂತೆ ಡಿಆರ್ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಆಗಲೂ ಸಹ ರನ್ಯಾಳನ್ನ ತಪಾಸಣೆ ಇಲ್ಲದೆ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್ಸ್ಟೇಬಲ್ ತೆರಳಿದ್ದರು. ರನ್ಯಾಳನ್ನ ಅಧಿಕಾರಿಗಳು ವಶಕ್ಕೆ ಪಡೆದಾಗ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ.
ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ತಿಳಿದಿದೆ. ತೊಡೆಯ ಭಾಗಕ್ಕೆ 14 ಬಿಸ್ಕೆಟ್ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿದೆ.
ಇದರ ಜೊತೆಗೆ ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ನಟಿ ರನ್ಯಾ ರಾವ್ ಪ್ರತಿ ಬಾರಿಯೂ ಒಂದೇ ಜಾಕೆಟ್ ಧರಿಸಿ ವಾಪಸ್ ಆಗುತ್ತಿದ್ದರು. ಆ ಜಾಕೆಟ್ನಲ್ಲಿ ಹೆಚ್ಚಿನ ಚಿನ್ನ ತರಲು ಅನುಕೂಲವಾಗುವಂತೆ ಬಟ್ಟೆ ಧರಿಸಿರುತ್ತಿದ್ದರು. ಇದರಿಂದಾಗಿ ರನ್ಯಾ ರಾವ್ ಮೇಲೆ ಡಿಆರ್ಐ ಅಧಿಕಾರಿಗಳ ಅನುಮಾನ ಹೆಚ್ಚಾಗಿದೆ. ರನ್ಯಾ ರಾವ್ ತಾನು ಧರಿಸಿದ್ದ ಜಾಕೆಟ್ನಲ್ಲೇ ಬಹುಪಾಲು ಚಿನ್ನ ಇಟ್ಟುಕೊಂಡಿದ್ದರು.
ದುಬೈನಲ್ಲಿ ರನ್ಯಾ ರಾವ್ಗೆ ಕೋಟಿ, ಕೋಟಿ ಚಿನ್ನ ಖರೀದಿ ಮಾಡಲು ಹಣ ಹೇಗೆ ಬಂತು. ಹಣ ಪಾವತಿ ಮಾಡಿರುವ ವಿಧಾನದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ನಗದು ಹಣವನ್ನೇ ರನ್ಯಾ ರಾವ್ ನೀಡಿ ಚಿನ್ನ ಖರೀದಿಸಿದ್ರಾ? ಇಲ್ಲವೇ ದುಬೈನಲ್ಲಿ ಯಾರು ಹಣ ಕೊಟ್ಟರು? ರನ್ಯಾ ರಾವ್ ಅವರು ಹವಾಲಾ ಮಾರ್ಗದಿಂದ ದುಬೈಗೆ ಹಣ ಸಾಗಿಸಿ ಚಿನ್ನ ಖರೀದಿಸಿದ್ದಾರಾ ಎಂಬ ಬಗ್ಗೆಯೂ ಶಂಕಿಸಲಾಗುತ್ತಿದೆ.