ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ಉಗುರು ಧರಿಸಿದ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳುನಟ ದರ್ಶನ್ ಹಾಗೂ ಜಗ್ಗೇಶ್ ಮನೆಗೆ ಇಂದು (ಅಕ್ಟೋಬರ್ 25) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನಲ್ಲೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೊಟೀಸ್ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಮದುವೆ ಸಮಯದಲ್ಲಿ ಹುಲಿಯ ಉಗುರಿನ ಸರವೊಂದನ್ನು ಕೊರಳಿಗೆ ಧರಿಸಿದ್ದ ಚಿತ್ರಗಳು ವೈರಲ್ ಆಗಿತ್ತು ಹಾಗಾಗಿ ಅವರ ವಿರುದ್ಧವೂ ಕೆಲ ಸಂಘಟನೆಗಳು ದೂರು ನೀಡಿದ್ದವು. ಇಂದು ಅರಣ್ಯಾಧಿಕಾರಿಗಳು ನಿಖಿಲ್ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಆದರೆ ಈ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಆಗಲಿ ಅಥವಾ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಾಗಲಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಅನಿತಾ ಕುಮಾರಸ್ವಾಮಿ ಅವರು ಈ ವೇಳೆ ಹಾಜರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗೆ ನೊಟೀಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಚೈನ್ ಧರಿಸಿದ್ದರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದ್ದಂತೆ ಈ ಸಂಬಂಧ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದ ನಿಖಿಲ್ ಕುಮಾರಸ್ವಾಮಿ, ತಾವು ಧರಿಸಿದ್ದು ನಿಜವಾದ ಹುಲಿ ಉಗುರನ್ನು ಬದಲಿಗೆ ಅದೇ ಮಾದರಿಯ ಚೈನು ಎಂದಿದ್ದಾರೆ.