March 23, 2026
Monday, March 23, 2026
spot_img

ಅಕ್ಷರ ದಾಸೋಹದಲ್ಲಿ ಅವಾಂತರ: ಬಿಸಿಯೂಟದ ಬಾಕ್ಸ್ ತೆರೆದ ಶಿಕ್ಷಕರು ಶಾಕ್!

ಹೊಸದಿಗಂತ ಹುಬ್ಬಳ್ಳಿ:

ನಗರದ ತಾರಿಹಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಪ್ರತಿದಿನದಂತೆ ಸೋಮವಾರವೂ ಖಾಸಗಿ ಸಂಸ್ಥೆಯೊಂದು ಶಾಲೆಗೆ ಬಿಸಿಯೂಟ ಪೂರೈಕೆ ಮಾಡಿತ್ತು. ಮಧ್ಯಾಹ್ನದ ಊಟದ ಸಮಯದಲ್ಲಿ ಅನ್ನ ಮತ್ತು ಸಾಂಬಾರ್ ಪಾತ್ರೆಗಳನ್ನು ತೆರೆದಾಗ ಅವುಗಳಲ್ಲಿ ಹುಳಗಳು ತೇಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು ಊಟ ಮಾಡದೆ ಮನೆಗೆ ತೆರಳಿ ಹಸಿವು ನೀಗಿಸಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಶಾಲಾ ಆವರಣಕ್ಕೆ ಧಾವಿಸಿದ ಪೋಷಕರು ಮತ್ತು ಗ್ರಾಮಸ್ಥರು, ಮಕ್ಕಳ ಆರೋಗ್ಯದೊಂದಿಗೆ ಆಟವಾಡುತ್ತಿರುವ ಆಹಾರ ಪೂರೈಕೆದಾರ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, “ತಾರಿಹಾಳ ಶಾಲೆಯ ಬಿಸಿಯೂಟದಲ್ಲಿ ಹುಳಗಳು ಬಂದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !