ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಭೀಮ ಹೆಜ್ಜೆ’ ಯಾತ್ರೆ ಬಿಜೆಪಿಗರ ಅನೈತಿಕ ಯಾತ್ರೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆಯೊಂದನ್ನು ನೀಡಿದ್ದು, ಈ ಹೇಳಿಕೆ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಬಾಬಾ ಸಾಹೇಬರ ಸೋಲಿಗೆ ಕುತಂತ್ರ, ಹುನ್ನಾರ ಮಾಡಿ, ಅವರಿಗೆ ಭಾರತ ರತ್ನವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ಪಕ್ಷ, ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್ ಸಂಚು ಮಾಡಿದ್ದರು ಎಂದು ಹೇಳುವುದು ನಾಚಿಕೆಗೇಡಿನ ಪರಮಾವಧಿ.
ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರ ಬಗ್ಗೆ ಇದ್ದ ಅಸಹನೆ, ಅವರನ್ನು ತುಳಿಯಲು, ಕಡೆಗಣಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ ಎಂದು ಅಶೋಕ್ ಹೇಳಿದ್ದಾರೆ.
ನಿಜವಾದ ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.