ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ USAID ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 13,500ಕ್ಕೂ ಹೆಚ್ಚು ಮಂದಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆಗೆ ಕಳುಹಿಸಿದ್ದಾರೆ.
USAID ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವಾದ್ಯಂತ ಸುಮಾರು 14 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 294 ಮಂದಿಯನ್ನು ಮಾತ್ರ ಉಳಿಸಿದ್ದು ಉಳಿದ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲಾಗಿದೆ.
ವಿಶ್ವದ ಶ್ರೀಮಂತ ವ್ಯಕ್ತಿ, ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಸಲಹೆಯ ಬೆನ್ನಲ್ಲೇ ಟ್ರಂಪ್ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
USAID ಹಲವರು ದೇಶಗಳಿಗೆ ಹಣಕಾಸಿನ ಸಹಾಯ ನೀಡುತ್ತಿದೆ. ಬಡತನ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಈ ಹಣವನ್ನು ಬಳಕೆ ಮಾಡಲು ಅಮೆರಿಕ ಸರ್ಕಾರ ಹಲವು ದೇಶಗಳಿಗೆ ಈ ಅನುದಾನ ನೀಡುತ್ತಾ ಬಂದಿದೆ.ಅನುದಾನ ಹಂಚಿಕೆಯಲ್ಲಿ ಕೇವಲ 10% ಮಾತ್ರ ನಿಜವಾದ ಫಲಾನುಭವಿಗಳಿಗೆ ಸಹಾಯವಾಗುತ್ತದೆ. ಉಳಿದ ಹಣಗಳು ಸರ್ಕಾರೇತರ ಸಂಸ್ಥೆ, ಎಡಪಂಥೀಯ ಮಾಧ್ಯಮಗಳಿಗೆ ಬಳಕೆಯಾಗುತ್ತದೆ ಎಂದು ಮಸ್ಕ್ ದೂರಿದ್ದಾರೆ.
ನಮ್ಮ ದೇಶದ ಜನರೇ ಸಂಕಷ್ಟಕ್ಕೆ ಸಿಲುಕಿರುವಾಗ ಬೇರೆ ದೇಶಗಳಿಗೆ ಯಾಕೆ ಅನುದಾನ ನೀಡಬೇಕು. ಅಮೆರಿಕ ಸರ್ಕಾರ ವಿದೇಶಗಳಿಗೆ ನೀಡುತ್ತಿರುವ USAID ಅನ್ನು ಕ್ರಿಮಿನಲ್ ಸಂಘಟನೆ ಎಂದು ಮಸ್ಕ್ ಕರೆದಿದ್ದಾರೆ. ಈ ಅನುದಾನ ನಿಜವಾಗಿಯೂ ಬಡ ದೇಶಗಳಿಗೆ ತಲುಪುತ್ತಿಲ್ಲ. ಇದು ಅಮೆರಿಕ ಸರ್ಕಾರವನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತದೆ. ಈ ಎನ್‌ಜಿಒಗಳು ಆ ಹಣವನ್ನು ಸರ್ಕಾರದ ಡೆಮಾಕ್ರಟಿಕ್ ನಾಯಕರಿಗೆ ಕಳುಹಿಸುತ್ತಾರೆ. ಅಕ್ರಮ ಹಣ ವರ್ಗಾವಣೆ ಮಾಡಲು USAID ಇದನ್ನು ಬಳಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
ನಷ್ಟದಲ್ಲಿದ್ದ ಟ್ವಿಟ್ಟರ್ (Twitter) ಕಂಪನಿಯನ್ನು ಖರೀದಿಸಿದ ಬಳಿಕ ಮಸ್ಕ್ ಮಾಡಿದ ಮೊದಲ ಕೆಲಸ ಏನೆಂದರೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದರು. ಟ್ವಿಟ್ಟರ್ ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಬಳಿಕ 80% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿದ್ದನ್ನು ಮಸ್ಕ್ ಸಮರ್ಥಿಸಿಕೊಂಡಿದ್ದರು.
ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು 80% ರಷ್ಟು ಮಂದಿಗೆ ಗೇಟ್‌ಪಾಸ್ ನೀಡಲಾಗಿದೆ.