ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದಿಂದ ಕಚ್ಚಾ ತೈಲ ಆಮದು ವಿಚಾರವಾಗಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒತ್ತಡ ಮತ್ತೊಮ್ಮೆ ಹೆಚ್ಚಾಗಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಬಂಧಿಸಿದ ಬಳಿಕ ಜಾಗತಿಕ ರಾಜಕಾರಣದಲ್ಲಿ ಕಠಿಣ ನಿಲುವು ತಾಳಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಮೇಲೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದಿದ್ದರೆ ಹೆಚ್ಚುವರಿ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವೈಯಕ್ತಿಕ ಗೌರವವಿದೆ ಎಂದು ಹೇಳಿರುವ ಟ್ರಂಪ್, ಆದರೆ ರಷ್ಯಾ ಜೊತೆ ಭಾರತದ ವ್ಯಾಪಾರದಿಂದ ತಾವು ಸಂತೋಷವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡುವ ಭರವಸೆ ನೀಡಿದೆ ಎಂದು ಟ್ರಂಪ್ ಹೇಳಿದ್ದರೂ, ಭಾರತ ಆಮದು ಮುಂದುವರಿಸಿದ್ದರಿಂದ ಅಸಮಾಧಾನ ಗಾಢವಾಗಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: Snacks Series 1 | ಮಂಗಳೂರು ಸ್ಟೈಲ್ ಬಟಾಟೆ ಅಂಬಡೆ! ರುಚಿ ನೋಡಿದ್ದೀರಾ?
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 500 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಇರುವಾಗಲೇ, ವ್ಯಾಪಾರ ಒಪ್ಪಂದದ ಮಾತುಕತೆಗಳು ಅಡೆತಡೆ ಎದುರಿಸುತ್ತಿವೆ. ಈಗಾಗಲೇ ಆರು ಸುತ್ತಿನ ಚರ್ಚೆಗಳು ನಡೆದಿದ್ದರೂ ಅಂತಿಮ ಒಪ್ಪಂದ ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲೇ ಅಮೆರಿಕ ಭಾರತದಿಂದ ಆಮದು ಆಗುವ ಕೆಲ ವಸ್ತುಗಳ ಮೇಲೆ ಮೊದಲು 25 ಶೇಕಡಾ ಸುಂಕ ವಿಧಿಸಿತ್ತು. ನಂತರ ರಷ್ಯಾ ತೈಲ ಆಮದು ವಿಚಾರವನ್ನು ಮುಂದಿಟ್ಟು ಮತ್ತಷ್ಟು 25 ಶೇಕಡಾ ದಂಡ ಹೇರಲಾಗಿದೆ. ಪರಿಣಾಮವಾಗಿ ಕೆಲವು ಭಾರತೀಯ ಉತ್ಪನ್ನಗಳಿಗೆ ಈಗ ಅಮೆರಿಕದಲ್ಲಿ ಒಟ್ಟು 50 ಶೇಕಡಾ ಸುಂಕ ವಿಧಿಸಲಾಗುತ್ತಿದೆ.

