ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತಷ್ಟು ಜೋರಾಗಿದೆ. ಅಮೆರಿಕ ವಿಧಿಸಿದ್ದ 145% ತೆರಿಗೆಗೆ ಪ್ರತಿಯಾಗಿ ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 125% ತೆರಿಗೆ ವಿಧಿಸುವುದಾಗಿ ಪ್ರಕಟಿಸಿದೆ.
ತನ್ನ ಹೊಸ ಸುಂಕಗಳು ಶನಿವಾರದಿಂದ ಜಾರಿಗೆ ಬರಲಿವೆ ಎಂದು ಚೀನಾ ಹೇಳಿದೆ. ಅಮೆರಿಕದ ಸುಂಕ ಹೆಚ್ಚಳದ ನಂತರ ಚೀನಾ ಕೂಡ WTOನಲ್ಲಿ ಮೊಕದ್ದಮೆ ಹೂಡಿದೆ ಎಂದು ಚೀನಾ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್ ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು. ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್ ತೆರಿಗೆಯನ್ನು 104% ಏರಿಕೆ ಮಾಡಿದ್ದರು. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕುವ ಮೂಲಕ ಒಟ್ಟು 145% ತೆರಿಗೆ ಏರಿಸಿದ್ದರು. ಈಗ ಚೀನಾ 125% ತೆರಿಗೆ ಹಾಕುವುದಾಗಿ ಘೋಷಿಸಿದೆ.
ಚೀನಾದ ಮೇಲೆ ಯುಎಸ್ ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತಾರಾಷ್ಟ್ರೀಯ ಮತ್ತು ಆರ್ಥಿಕ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳು ಮತ್ತು ಸಾಮಾನ್ಯ ಜ್ಞಾನವನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು ಸಂಪೂರ್ಣವಾಗಿ ಏಕಪಕ್ಷೀಯ ಬೆದರಿಸುವಿಕೆ ಮತ್ತು ಬಲವಂತವಾಗಿದೆ ಎಂದು ಚೀನಾ ಹಣಕಾಸು ಸಚಿವಾಲಯ ತಿಳಿಸಿದೆ.
ಅಮೆರಿಕಕ್ಕೆ ರಫ್ತು ಮಾಡುವ ಚೀನೀ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕಗಳನ್ನು ವಿಧಿಸುವುದನ್ನು ಮುಂದುವರಿಸಿದರೆ, ಚೀನಾ ಅದನ್ನು ನಿರ್ಲಕ್ಷಿಸುತ್ತದೆಎಂದು ಚೀನಾದ ಹಣಕಾಸು ಸಚಿವಾಲಯ ಹೇಳಿದೆ.